ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಆರ್‌ಜೆಡಿ ನಾಯಕ ರಾಜ್‌ಕುಮಾರ್ ರೈ ಅಲಿಯಾಸ್ ಅಲ್ಲಾ ರೈಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪಾಟ್ನಾದ ಚಿತ್ರಗುಪ್ತದ ಮುನ್ನಾಚಕ್ ಪ್ರದೇಶದಲ್ಲಿ ನಡೆದಿದೆ.
ಬುಧವಾರ ರಾತ್ರಿ ಇಬ್ಬರು ಅಪರಿಚಿತರ ಗುಂಡಿನ ದಾಳಿಯಿಂದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ರಾಜ್‌ಕುಮಾರ್ ರೈ ಅಲಿಯಾಸ್ ಅಲ್ಲಾ ರೈ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ , ರಾಜ್ಯ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ನಡೆದಿದ್ದು, ಆತಂಕ ಹೆಚ್ಚಿಸಿದೆ. ಮೂಲಗಳ ಪ್ರಕಾರ, ರೈ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿತ್ತು.
ಪ್ರಕರಣದ ತನಿಖೆ ನಡೆಯುತ್ತಿದ್ದು, ಭೂ ವಿವಾದವೇ ಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ರೈ ಭೂ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಘಟನೆಯ ಬಗ್ಗೆ ತಿಳಿದ ಪೊಲೀಸ್ ತಂಡ ರೈ ಅವರನ್ನು ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಸ್ಥಳದಿಂದ ಆರು ಕ್ಯಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗುವ ಮೊದಲು ಅಪರಾಧ ಎಸಗುತ್ತಿರುವುದು ಕಂಡುಬಂದಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪಾಟ್ನಾ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ ಪರಿಚಯ್ ಕುಮಾರ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿತು.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಮತ್ತು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಟ್ನಾ ಪೂರ್ವ ಎಸ್‌ಪಿ ಪರಿಚಯ್ ಕುಮಾರ್ ತಿಳಿಸಿದ್ದಾರೆ.