ಅಮೆರಿಕಾದಲ್ಲಿ ಸಂಪ್ರದಾಯವಾದಿ ಮುಖಂಡ ಮತ್ತು ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆಯಾದ ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಕರೆಸಿಕೊಳ್ಳುವ ಅಮೆರಿಕಾ, ಇತ್ತೀಚಿನ ದಶಕದಲ್ಲಿ ರಾಜಕೀಯ ಹಿಂಸಾಚಾರದ ದಾಳಿಗಳಿಗೆ ನಿರಂತರವಾಗಿ ತುತ್ತಾಗುತ್ತಿದೆ. ಗ್ಯಾಬಿ ಗಿಫೋರ್ಡ್ಸ್ ಮೇಲೆ ನಡೆದ ದಾಳಿ, ಟ್ರಂಪ್ ಹತ್ಯಾ ಯತ್ನ, ಮಿನ್ನೇಸೋಟ ಶಾಸಕರ ಹತ್ಯೆ ಇವೆಲ್ಲಾ ಅಮೆರಿಕಾದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂದು ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ.
ಇಂತಹ ಹತ್ಯೆಗಳು ಸಾಮಾನ್ಯವಾಗಿ ವೈಯಕ್ತಿಕ ಅಸಮಾಧಾನದಿಂದ ಮಾತ್ರ ನಡೆಯುವುದಿಲ್ಲವೆಂಬುದು ತಜ್ಞರ ಅಭಿಪ್ರಾಯ. ಒಂದೇ ರೀತಿಯ ರಾಜಕೀಯ ನಿಲುವು ಹೊಂದಿದ ನಾಯಕರನ್ನೇ ಗುರಿಯಾಗಿಸುತ್ತಿರುವುದನ್ನು ನೋಡಿದಾಗ ಇದರ ಹಿಂದೆ “ಡೀಪ್ ಸ್ಟೇಟ್”, “ಇಲುಮಿನಾಟಿ”, “ಅಂಡರ್ಗ್ರೌಂಡ್ ಮಿಲಿಟಂಟ್ ಗ್ರೂಪ್ಸ್” ಮುಂತಾದ ಹೆಸರುಗಳು ಸದಾ ಚರ್ಚೆಯಾಗುತ್ತಿವೆ. ಇವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ? ಸರ್ಕಾರದೊಳಗೆ ಅಥವಾ ಹೊರಗೆ ಕಾರ್ಯನಿರ್ವಹಿಸುವ ಗೋಚರಿಸದ ಶಕ್ತಿಗಳು ರಾಜಕೀಯ ನಾಯಕರನ್ನು ಗುರಿಯಾಗಿಸುತ್ತಿವೆಯೇ? ಎನ್ನುವ ಪ್ರಶ್ನೆ ಮತ್ತೆ ಎದುರಾಗಿದೆ.
ಚಾರ್ಲಿ ಕಿರ್ಕ್ ಹತ್ಯೆ ಕೇವಲ ವ್ಯಕ್ತಿಯ ಕೊಲೆಯಲ್ಲ; ಅದು ಪ್ರಜಾಪ್ರಭುತ್ವದ ಮೇಲೆ ಗುಂಡು ಹಾರಿಸಿದಂತಿದೆ. ಇದರ ಹಿಂದೆ ನಿಜವಾಗಿಯೂ ರಹಸ್ಯ ಸಮಾಜಗಳ ಕೈವಾಡವಿದೆಯೇ ಎಂಬುದು ತನಿಖೆಯೂ ನಡೆಯದಷ್ಟು ಅಮೆರಿಕಾದಂತಾ ದೈತ್ಯ ರಾಷ್ಟ್ರಗಳು ಅವುಗಳ ಕೈಗೊಂಬೆಗಳಾಗಿದೆ.
ಭಾರತದಲ್ಲಿಯೂ ರಾಜಕೀಯ ಹಿಂಸಾಚಾರದ ಇತಿಹಾಸ ಚಿಕ್ಕದಿಲ್ಲ. ಕೇರಳ, ಬಂಗಾಳ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷೀಯ ಘರ್ಷಣೆಗಳು ಪ್ರಾಣಹಾನಿಗೆ ಕಾರಣವಾಗಿವೆ. ಚುನಾವಣೆಗಳ ವೇಳೆಗೆ ಹಿಂಸಾಚಾರ ಹೆಚ್ಚಾಗುವುದು ಸಾಮಾನ್ಯ. ಬದಲಾವಣೆ ಏನೆಂದರೆ — ಅಮೆರಿಕಾದಲ್ಲಿ ಬಂದೂಕು ಪ್ರತಿ ನಾಗರಿಕನ ಕೈಯಲ್ಲಿದ್ದರೆ, ಭಾರತದಲ್ಲಿ ಅದು ಇನ್ನೂ ಕಾನೂನಿನ ಗಟ್ಟಿಯಾದ ನಿಯಂತ್ರಣದಲ್ಲಿದೆ. ಆದರೆ ಸಾಮಾಜಿಕ ಮಾಧ್ಯಮಗಳು “ವಾಕ್ಸಾಮರವನ್ನು” ದ್ವೇಷಭಾಷಣ, ಕಿರುಕುಳ, ಹತ್ಯಾ ಬೆದರಿಕೆಗಳ ಹಾದಿಗೆ ಒಯ್ಯುತ್ತಿವೆ. ಜನಪ್ರಿಯ ನಾಯಕರು ಗುರಿಯಾಗುತ್ತಿರುವುದು ಕೇವಲ ರಾಜಕೀಯ ಮಾತ್ರವಲ್ಲ, ಸಮಾಜದ ಮೂಲಭೂತ ಶಾಂತಿಗೂ ಸವಾಲು.
ಚಾರ್ಲಿ ಕಿರ್ಕ್ ಹತ್ಯೆಯಂತಹ ಘಟನೆಗಳು ಕೇವಲ ಅಮೆರಿಕಾದ ರಾಜಕೀಯದ ಅಸ್ಥಿರತೆಯ ಸಂಕೇತವಲ್ಲ, ಪ್ರಜಾಪ್ರಭುತ್ವದ ಜಗತ್ತಿನ ಎಲ್ಲರಿಗೂ ಎಚ್ಚರಿಕೆ.