ಮಂಗಳೂರು: ಪ್ರತಿಯೊಂದು ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕೌನ್ಸಿಲಿಂಗ್ ನೀಡುವ ಯೋಜನೆ ರೂಪಿಸಿದ್ದು, ಮುಂದಿನ ತಿಂಗಳಲ್ಲೇ ಪ್ರತಿಯೊಂದು ಕಾಲೇಜಿಗೂ ವೃತ್ತಿಪರ ಕೌನ್ಸಿಲರ್‌ಗಳನ್ನು ನಿಯೋಜಿಸಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ನಡೆಸುವ ತೀರ್ಮಾನ ಕೈಗೊಂಡಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಪೊಷಕರಿಗೆ ಸ್ವಾವಲಂಬಿ, ಸ್ವ ಉದ್ಯೋಗದ ತರಬೇತಿಯೊಂದಿಗೆ ಸರಕಾರದ ಯೋಜನೆಗಳ ಮಾಹಿತಿ ನೀಡುವ ಕಾರ್ಯವನ್ನು ಕ್ಷೇತ್ರದ ಪ್ರತೀ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು. ಶಕ್ತಿನಗರ ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು, ಮಾಧ್ಯಮ ಕೇಂದ್ರ ತೊಕ್ಕೊಟ್ಟು, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇವರ ನೇತೃತ್ವದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕೆ ಇಲಾಖೆ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೊ ಇಂಡಿಯಾ ಇವರ ಸಹಯೋಗದೊಂದಿಗೆ ಗ್ರಾಮ ಸಂಪರ್ಕ ಅಭಿಯಾನದ ಅಂಗವಾಗಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರಿಗೆ ಸ್ವಾವಲಂಬಿ – ಸ್ವಶಕ್ತ – ಸುಸ್ಥಿರ ಅಭಿವೃದ್ಧಿ ಮಾಹಿತಿ ಕಾರ್ಯಾಗಾರದ ಜಿಲ್ಲಾ ಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಭದ್ರ ಹಾಗೂ ಪ್ರಗತಿಶೀಲ ಭಾರತ ರೂಪಿಸಲು ಸಂಘಗಳು ಕೈಗೊಂಡಿರುವ ಕಾರ್ಯಕ್ರಮಗಳು ದೇಶದ ಭವಿಷ್ಯಕ್ಕಾಗಿ ಮಹತ್ವಪೂರ್ಣವಾದವು. ಭಾರತದ ಕನಸು ಕಂಡು, ಸಂಘಟಕರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅವರ ಹೆತ್ತವರಿಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದು, ಸರಕಾರ ಮತ್ತು ಜನಪ್ರತಿನಿಧಿಗಳು ಆಯೋಜಿಸಬೇಕಾದ ಕಾರ್ಯಕ್ರಮವನ್ನು ಸಾಮಾಜಿಕ ಸಂಘಟನೆಗಳು ಆಯೋಜಿಸಿರುವುದು ಶ್ಲಾಘನೀಯ.ಸರಕಾರದ ಯೋಜನೆಗಳನ್ನು ಪರಿಚಯಿಸಿದಾಗ ಪ್ರತಿಯೊಬ್ಬರಿಗೂ ಅವರ ಜೀವನದಲ್ಲಿ ಸಂಭ್ರಮ, ಸಾಧನೆ ಮತ್ತು ಸ್ವಾವಲಂಬನೆ ಬೆಳೆಯುತ್ತದೆ. ಸ್ವಾವಲಂಬಿ ಭಾರತ, ಸಶಕ್ತ ಭಾರತ, ವಿಕಸಿತ ಭಾರತ ಎನ್ನುವುದು ನಮ್ಮ ರಾಷ್ಟ್ರದ ಕನಸು. ಈ ಕನಸು ನನಸುಮಾಡಲು ಸರ್ಕಾರವು ನೀಡಿರುವ ಕಾರ್ಯಕ್ರಮಗಳು, ಜವಾಬ್ದಾರಿಗಳು ಹಾಗೂ ಸೇವೆಗಳು ಪೂರಕವಾಗಿದ್ದರೂ, ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಪ್ರಸ್ತುತ ೧ ಲಕ್ಷ ಜನರಲ್ಲಿ ೫ ಜನರಿಗೆ ಮಾತ್ರ ಸರಕಾರದ ಯೋಜನೆಗಳ ಮಾಹಿತಿ ತಲುಪುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆದರೂ ಸರಕಾರದ ಯೋಜನೆಗಳನ್ನು ಅನುಸರಿಸಲು ಯತ್ನಿಸಲಾಗುತ್ತಿಲ್ಲ. ದಿನಕ್ಕೆ ನಾಲ್ಕು ಗಂಟೆ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವುದರಿಂದ ಸಮಯ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಜ್ಞಾನಹಂಚುವ ಕಾರ್ಯಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಪ್ರಾರಂಭಿಸುವುದು ಅಗತ್ಯ ಎಂದರು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಎನ್ ಸುವರ್ಣ ವಹಿಸಿದ್ದರು. ಶಕ್ತಿನಗರದ ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ ಭಟ್, ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ| ಪ್ರಶಾಂತ್ ಕುಮಾರ್, ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ, ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನಿಯೋಜಿತ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಪದವು ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಕುಶಲ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಶೋಕ್ ನಾಯಕ್ ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿನ ವಿಜ್ನಾನಿ ಡಾ| ರಶ್ಮಿ , ಗುರುಪುರ ಹೋಬಳಿ ಸಹಾಯಕ ತೋಟಗಾರಿಕಾ ಅಧಿಕಾರಿ ಮಹೇಶ್ ಎನ್., ಸೆಲ್ಕೋ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರವೀನಾ ಬಂಗೇರ, ಸಂಯೋಜಕಿ ಸುಮಲತಾ , ಬೇ ವೀವ್ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಡಾ| ಸಜಿತಾ ಕೃಷ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕಿಟ್ಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠಲ್ ಎ. ಸ್ವಾಗತಿಸಿದರು. ಉಪನ್ಯಾಸಕಿ ಸುಜಾತ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು. ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ವಂದಿಸಿದರು.
ವಿದ್ಯಾರ್ಥಿಗಳು ಕೆಲವೊಮ್ಮೆ ಒತ್ತಡ, ಕಷ್ಟಗಳು ಮತ್ತು ಜೀವನದ ನಿರ್ಣಾಯಕ ಹಂತಗಳಿಂದ ಬಳಲುತ್ತಿದ್ದಾರೆ. ಇವುಗಳಿಂದ ಅವರನ್ನು ಹೊರಹಾಕಲು ಉತ್ತಮ ಮನೋವೈಜ್ಞಾನಿಕ ಮಾರ್ಗದರ್ಶನ ಅಗತ್ಯ. ಅವರ ಭವಿಷ್ಯವನ್ನು ಸ್ಪಷ್ಟಗೊಳಿಸಲು ಪ್ರತಿಯೊಂದು ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕೌನ್ಸಿಲಿಂಗ್‌ಗೆ ಆದ್ಯತೆ ನೀಡಲಿದ್ದು, ಇದಕ್ಕೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ತಜ್ಞರಿಂದ ಕೌನ್ಸಿಲಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು’
–ವೇದವ್ಯಾಸ ಕಾಮತ್