ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವತಿಯಿಂದ “ಸಹಕಾರಿ ಪಿತಾಮಹ” ದಿ| ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ 2024-25ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಸಿಬ್ಬಂದಿಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ವಿತರಣೆ ಸಮಾರಂಭ ಶನಿವಾರ ಬ್ಯಾಂಕ್ ಆಡಿಟೋರಿಯಂನಲ್ಲಿ ಜರುಗಿತು.
ಅವಿಸ್ಮರಣೀಯ ಕ್ಷಣ
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು, “ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವುದು ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ಉತ್ತಮ ಅಂಕವನ್ನು ಪಡೆದ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವ ರಾಜೇಂದ್ರ ಕುಮಾರ್ ಅವರು ಅಭಿನಂದನಾರ್ಹರು. ಅಕಾಡೆಮಿಕ್, ಅನಾಲಿಟಿಕಲ್, ಟೆಕ್ನಿಕಲ್ ಈ ಮೂರೂ ಸ್ಕಿಲ್ ಗಳನ್ನು ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ಸಾಧನೆ ಮಾಡಿದವರನ್ನು ರೋಲ್ ಮಾಡೆಲ್ ಗಳಾಗಿ ತೆಗೆದುಕೊಳ್ಳಬೇಕು. ಇಂತಹ ಒಬ್ಬ ರೋಲ್ ಮಾಡೆಲ್ ನಮ್ಮ ನಡುವಿದ್ದಾರೆ ಅವರೇ ಡಾ.ಎಂ.ಎನ್.ರಾಜೇಂದ್ರ ಕುಮಾರ್. ಪರಿಶ್ರಮದಿಂದ ಅವರು ಈ ಸಾಧನೆಯನ್ನು ಮಾಡಿದ್ದಾರೆ. ಇಂತಹ ಸಾಧಕರನ್ನು ಗುರಿಯಾಗಿ ಮತ್ತು ಗುರುವಾಗಿ ತೆಗೆದುಕೊಂಡರೆ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯ“ ಎಂದರು.
ಸಂತೋಷದಾಯಕ ಕ್ಷಣ
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಮಾತಾಡಿ, “ಬ್ಯಾಂಕ್ ಮೂಲಕ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಇದು ಅತ್ಯಂತ ಸಂತೋಷದಾಯಕ ಕ್ಷಣಗಳಾಗಿವೆ. ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಮಕ್ಕಳು ಮತ್ತು ಪೋಷಕರಿಗೆ ಅಭಿನಂದನೆಗಳು” ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೈದ ನೃತ್ಯ ವಿದುಷಿ ದೀಕ್ಷಾ ವಿ. ಉಡುಪಿ ಅವರನ್ನು 1 ಲಕ್ಷ ರೂ. ಗೌರವಧನ ಕೊಟ್ಟು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನಿರ್ದೇಶಕರುಗಳಾದ ಟಿ.ಜಿ.ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬೊಳ್ಯೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಎಂ.ಮಹೇಶ್ ಹೆಗ್ಡೆ, ಬಿ.ಅಶೋಕ್ ಕುಮಾರ್ ಶೆಟ್ಟಿ, ಕೆ.ಜೈರಾಜ್ ಬಿ.ರೈ, ಕುಶಲಪ್ಪಗೌಡ ಪಿ, ಎಸ್.ಎನ್. ಮನ್ಮಥ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ರಮೇಶ್ ಹೆಚ್.ಎನ್. ಮತ್ತಿತರರು ಉಪಸ್ಥಿತರಿದ್ದರು.
ಬೆಳಪು ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಚಿತ್ರಲೇಖ ಶೆಟ್ಟಿ ದೇವರನ್ನು ಸ್ತುತಿಸಿದರು. ನಿತ್ಯಾನಂದ ಶೇರಿಗಾರ್ ಧನ್ಯವಾದ ಸಮರ್ಪಿಸಿದರು.ವೇದಿಕೆಯಲ್ಲಿ ಯೋಗ ಸಾಧಕಿ ತನುಶ್ರೀ ಪಿತ್ರೋ ಡಿ ಅವರಿಂದ ಯೋಗ ಪ್ರದರ್ಶನ ಜರುಗಿತು.