ಆರೋಪಿ ಚಿನ್ನಯ್ಯನ ಕಸ್ಟಡಿ ಸೆ.6ರವರೆಗೆ ವಿಸ್ತರಣೆ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಇನ್ನೂ ಮೂರು ದಿನ ವಿಸ್ತರಣೆಗೊಂಡಿದೆ. ಬುಧವಾರ ಅವನ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಅವನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸೆಪ್ಟೆಂಬರ್ 6ರವರೆಗೆ ಕಸ್ಟಡಿಗೆ ನೀಡುವಂತೆ ಆದೇಶಿಸಿದರು.
ಚಿನ್ನಯ್ಯ ವಾಸವಿದ್ದ ಮಂಡ್ಯ, ತಮಿಳುನಾಡು ಹಾಗೂ ಇತರ ಕಡೆಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ಕಸ್ಟಡಿ ಅಗತ್ಯವಿದೆ ಎಂದು ಎಸ್ಐಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಧರ್ಮಸ್ಥಳ ಗ್ರಾಮಸ್ಥರಿಂದ ದೂರು
ವಕೀಲ ಕೆ.ವಿ. ಧನಂಜಯ ಸೇರಿದಂತೆ ನಾಲ್ವರು ವಕೀಲರ ವಿರುದ್ಧ ಕ್ರಮಕ್ಕೆ ಒತ್ತಾಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ ಹಾಗೂ ಅವರ ತಂಡದ ವಿರುದ್ಧ ಧರ್ಮಸ್ಥಳ ಗ್ರಾಮಸ್ಥರು ಬುಧವಾರ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ದೂರು ನೀಡಿದ್ದಾರೆ.
ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಎಲ್ಲಾ ದಾಖಲೆಗಳನ್ನು ಧನಂಜಯ ಅವರಿಗೆ ನೀಡಿರುವುದಾಗಿ ಹೇಳಿದ್ದು, ಆ ದಾಖಲೆಗಳ ಸ್ವರೂಪವನ್ನು ಪರಿಶೀಲಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ವಕೀಲರಾದ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್ ಧೀರಜ್ ಹಾಗೂ ಮಂಜುನಾಥ್ ಇವರ ವಿರುದ್ಧವೂ ದೂರು ದಾಖಲಾಗಿದೆ.
ಎಸ್ಐಟಿ ದೂರು ಸ್ವೀಕರಿಸಿದ್ದು, ತನಿಖೆ ನಡೆಸುವುದಾಗಿ ತಿಳಿಸಿದೆ.