ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದ ತರುಣಿ ನೇಣಿಗೆ

ಬೆಂಗಳೂರು: ಗಂಡನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳಕ್ಕೊಳಗಾದ 28 ವರ್ಷಿಯ ತರುಣಿ ಪೂಜಾಶ್ರೀ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದ ಈ ಘಟನೆಯಿಂದ ಮೂರು ವರ್ಷದ ಪುಟ್ಟ ಹೆಣ್ಣು ಮಗು ಅನಾಥವಾಗಿದೆ.

ಪೂಜಾಶ್ರೀ ಅವರು ಮೂರು ವರ್ಷಗಳ ಹಿಂದೆ ನಂದೀಶ್ ಅವರನ್ನು ವಿವಾಹವಾಗಿದ್ದರು. ಇವರಿಗೆ ಒಂದು ಹೆಣ್ಣು ಮಗು ಇದೆ. ಪತಿ ನಂದೀಶ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪೂಜಾಶ್ರೀ ಖಾಸಗಿ ಬ್ಯಾಂಕ್ನಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕಳೆದ ಒಂದು ವರ್ಷದಿಂದ ಪತಿ ನಂದೀಶ್ ಅನೈತಿಕ ಸಂಬಂಧ ಹೊಂದಿದ್ದು, ಇದನ್ನು ಪೂಜಾಶ್ರೀ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ನಂದೀಶ್ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಪೂಜಾಶ್ರೀ ಅವರ ಮೇಲೆ ವರದಕ್ಷಿಣೆ ಕೊಡದೇ ಇರುವುದಕ್ಕೆ ಸಂಬಂಧಪಟ್ಟಂತೆ ಆರೋಪಗಳನ್ನು ಮಾಡಿ ಕಿರುಕುಳ ನೀಡಿದ್ದಾರೆ.

ಈ ಕಿರುಕುಳದಿಂದ ಬೇಸತ್ತ ಪೂಜಾಶ್ರೀ ತವರು ಮನೆಗೆ ಹೋಗಿದ್ದರು. ಇದರ ನಡುವೆ ರಾಜೀನಾಮೆ ನಡೆದಿದ್ದು, ನಂದೀಶ್ ಮರುದಿನ ಪೂಜಾಶ್ರೀ ಅವರನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆದರೆ, ಮೂರು ದಿನಗಳ ಹಿಂದೆ ಮತ್ತೆ ಜಗಳ ಮಾಡಿದ ನಂದೀಶ್ ಪತ್ನಿ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಮತ್ತೆ ತವರು ಮನೆಗೆ ಹೋದ ಪೂಜಾಶ್ರೀ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂಜಾಶ್ರೀ ಅವರ ಪೋಷಕರ ದೂರಿನ ಆಧಾರದ ಮೇಲೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಾಗಿದ್ದು, ಪತಿ ನಂದೀಶ್ ಅವರನ್ನು ಬಂಧಿಸಲಾಗಿದೆ.

error: Content is protected !!