ಆಲಪ್ಪುಳ: ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾದ್‌ನ ಒಂದು ದೇವಸ್ಥಾನದ ಆನೆ ಮದವೇರಿ, ಓರ್ವ ಮಾವುತನನ್ನು ಕೊಂದು ಹಾಕಿದ್ದು, ಇನ್ನಿಬ್ಬರನ್ನು ಗಂಭೀರ ಗಾಯಗೊಳಿಸಿದೆ.
ಮದೋನ್ಮತ್ತವಾಗಿದ್ದ ʻಸ್ಕಂದನ್’ ಎಂಬ ಹೆಸರಿನ ಆನೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಿತು. ಮಾವುತ ಸುನಿಲ್ ಕುಮಾರ್ ಮೇಲೆ ಮೊದಲು ದಾಳಿ ನಡೆಸಿದ ಈ ಆನೆ, ಆನಂತರ ತನ್ನನ್ನು ನಿಯಂತ್ರಿಸಲು ಮುಂದೆ ಬಂದ ನಿರ್ವಾಹಕ ಮುರಳೀಧರನ್ ಅವರ ಮೇಲೂ ದಾಳಿ ನಡೆಸಿತು.
ಗಂಭೀರವಾಗಿ ಗಾಯಗೊಂಡ ಮುರಳೀಧರನ್ ಅವರನ್ನು ಆಸ್ಪತ್ರೆಗೆ ತರುವ ದಾರಿಯಲ್ಲಿ ಅವರು ಮೃತಪಟ್ಟಿದ್ದಾರೆ. ಸುನಿಲ್ ಕುಮಾರ್ ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ತಿಂಗಳುಗಳಿಂದ ಮದೋನ್ಮತ್ತವಾಗಿದ್ದ ಈ ಆನೆಯನ್ನು ದೇವಸ್ಥಾನದ ಅರ್ಚಕರ ಮನೆಯಲ್ಲಿ ಕಟ್ಟಿ ಇಡಲಾಗಿತ್ತು. ಆನೆಯನ್ನು ದೇವಸ್ಥಾನಕ್ಕೆ ಸ್ಥಳಾಂತರಿಸುವ ಪ್ರಯತ್ನದಲ್ಲಿದ್ದ ಸಮಯದಲ್ಲಿ ಈ ದುರಂತ ನಡೆದಿದೆ.
ಪೊಲೀಸರು ಘಟನೆಯ ವಿವರಗಳನ್ನು ದಾಖಲಿಸಿ ಮುಂದಿನ ನಡವಳಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.