ಮಂಗಳೂರು: ರಸರಾಗ ಚಕ್ರವರ್ತಿ ಬಿರುದಾಂಕಿತ ಖ್ಯಾತ ಯಕ್ಷಗಾನ ಭಾಗವತ ದಿನೇಶ ಅಮ್ಮಣ್ಣಾಯರಿಗೆ ಆ.31ರಂದು ಕಾಸರಗೋಡಿನ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಜರುಗಲಿರುವ ಮಂಗಳೂರಿನ ಕಡಬ ಸಂಸ್ಮರಣಾ ಸಮಿತಿಯ ಆರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳಿಂದ ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆಯೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರಿನ ಗೌರವ ಕಾರ್ಯದರ್ಶಿ ಗಿರೀಶ್ ಕಾವೂರು ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಅಮ್ಮಣ್ಣಾಯರ ಪೌರಾಣಿಕ ಪ್ರಸಂಗಗಳು ಹಾಗೂ ಹೆಸರಾಂತ ತುಳು ಪ್ರಸಂಗದ ಹಾಡುಗಳು ಈಗಲೂ ಜನಮಾನಸದಲ್ಲಿ ಮರೆಯುವಂತಿಲ್ಲ. ಅದರಲ್ಲೂ “ಕಚೂರ ಮಾಲ್ಕಿ” ಪ್ರಸಂಗದ “ಬಂಗಾರ್ ಬಾಲೆ ಈರ್ ಪಿದಯಿ ಪೊವಡೆ ಮಗಾ” ಈ ಸಂಗೀತದ ರಸಸ್ವಾದಕ್ಕೆ ತಲೆ ಭಾಗದವರೇ ಇಲ್ಲ. ಕೇವಲ ಭಾಗವತಿಕೆ ಅಲ್ಲದೇ ಭಕ್ತಿಗೀತೆಯ ಧ್ವನಿ ಸುರುಳಿಗಳು, ಸಾವಿರದಿಂದ ಅಧಿಕವಾಗಿರುವ ಯಕ್ಷಗಾನ ಕ್ಯಾಸೆಟ್‌ಗಳು ಪ್ರತಿಯೊಬ್ಬರ ಮನ-ಮನೆಗಳಲ್ಲಿ ಆಗಿನ ಕಾಲದಲ್ಲಿ ರಾರಾಜಿಸುತ್ತಿದ್ದವು. ಆದರೂ ಅವರು ಕಳೆದ 26 ವರ್ಷಗಳಿಂದ ಅರಸಿನಮಕ್ಕಿಯಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದು ಯಾವುದೇ ಪ್ರಚಾರದ ಹಿಂದೆ ಹೋಗದೆ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಅದಕ್ಕಾಗಿ ಮಂಗಳೂರಿನ ಕಡಬ ಸಂಸ್ಮರಣಾ ಸಮಿತಿಯ ಆರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಗಿರೀಶ್ ಹೇಳಿದರು.
ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿ ಹೆಸರು ಗಳಿಸಿ ಹಿರಿಯ ಕಲಾವಿದರಾಗಿ ಸೇವೆಗೈದು ಅದರಲ್ಲೂ “ಪದ್ಯಾಣ + ಕಡಬ” ಜೋಡಿ ಎಂದೇ ಪ್ರಸಿದ್ದಿ ಪಡೆದು ಕಣ್ಮರೆಯಾದ ಕಡಬ ನಾರಾಯಣ ಆಚಾರ್ಯ ಮತ್ತು ಅತೀ ಸಣ್ಣ ಪ್ರಾಯದಲ್ಲೇ ಆದೀತಿಯ ಮದ್ದಳೆವಾದಕರಾಗಿ ಯಕ್ಷರಂಗಕ್ಕೆ ತನ್ನದೇ ಆದ ಛಾಪನ್ನು ಮೂಡಿಸಿ ಇಹಲೋಕ ತ್ಯಜಿಸಿದ ಅವರ ಪುತ್ರ ಕಡಬ ವಿನಯ ಆಚಾರ್ಯರವರ ಹೆಸರನ್ನು ಶಾಶ್ವತವಾಗಿರಿಸಲು, ಪ್ರತೀ ವರ್ಷವೂ ಸಂಸ್ಮರಣೆ ಹಾಗೂ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ”ಕಡಬ ವಿನಯ. ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ”ಯನ್ನು ನೀಡುತ್ತಾ ಬರುತ್ತಿದೆ ಎಂದರು.
ಯಕ್ಷರಂಗದಲ್ಲಿ ಅಮ್ಮಣ್ಣಾಯರ ಪದ್ಯಗಳನ್ನು ಆಲಿಸುವಾಗ ಕರ್ನಾಟಕ ಮೇಳ ನೆನಪಾಗುವುದು ಸಹಜ. ಕುಲೀನ ಮನೆತನದ ಶ್ರೀ ನಾರಾಯಣ ಅಮ್ಮಣ್ಣಾಯ ಮತ್ತು ಶ್ರೀಮತಿ ಕಾವೇರಿಯಮ್ಮ ದಂಪತಿಯ ಪ್ರೀತಿಯ ಪುತ್ರರಾಗಿ ಜನಿಸಿ ಉತ್ತಮ ವಿದ್ಯಾರ್ಥಿಯಾಗಿ, ಪದವಿಪೂರ್ವ ವಿದ್ಯಾಭ್ಯಾಸವನ್ನು ಪೂರೈಸಿ ತನ್ನ 18ನೇ ಹರೆಯದಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿ ಗುರುಗಳಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಲ್ಲಿ ಮದ್ದಳೆವಾದನವನ್ನು ಮತ್ತು ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರಲ್ಲಿ ಭಾಗವತಿಕೆಯನ್ನು ಅಭ್ಯಾಸಿಸಿ ತಮ್ಮ ಹಿರಿಯ ಸಹೋದರಿಯವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತು, ಅದನ್ನು ಯಕ್ಷಗಾನಕ್ಕೆ ಅಳವಡಿಸಿಕೊಂಡವರು. ಬಳಿಕ ಕುಂಡಾವು ಮೇಳದಲ್ಲಿ ಮದ್ದಳವಾದಕರಾಗಿ ತಿರುಗಾಟ ಪ್ರಾರಂಭಿಸಿ ಪುತ್ತೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಒಂದು ವರ್ಷ, ಮುಂದೆ ಪ್ರತಿಷ್ಠಿತ ಕಲ್ಲಾದಿ ಮನೆತನದ ವ್ಯವಸ್ಥಾಪಕತ್ವದಲ್ಲಿದ್ದ ಕರ್ನಾಟಕ ಮೇಳಕ್ಕೆ ಸೇರ್ಪಡೆಗೊಂಡು ದಿ. ದಾಮೋದರ ಮಂಡೆಚ್ಚರಿಗೆ ಮದ್ದಳೆವಾದಕರಾಗಿ, ಅವರೊಂದಿಗೆ ಕಲಾಬಾಂಧವ್ಯ ಬೆಳೆಸಿ, ಭಾಗವತಿಕೆಯ ಸೂಕ್ಷ್ಮ ಮಟ್ಟುಗಳು, ರಂಗ ಪರಿಕ್ರಮ, ಪ್ರಸಂಗದ ನಡೆಗಳ ಜ್ಞಾನ, ರಾಗಗಳ ಅಳವಡಿಕೆಯ ಮಾದರಿ ಪಡೆದು ಅಮ್ಮಣ್ಣಾಯರು ಭಾಗವತರಾಗಿ ಮೆರೆದು ದಾಮೋದರ ಮಂಡೆಚ್ಚರ ಪರಮ ಶಿಷ್ಟರಾದವರು ಎಂದು ನೆನಪಿಸಿಕೊಂಡರು.
ಗೋಷ್ಠಿಯಲ್ಲಿ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ, ಗೌರವಾಧ್ಯಕ್ಷ ಗಿರಿ ಆಚಾರ್ಯ, ಸಮಿತಿ ಸದಸ್ಯರಾದ ಲೋಕೇಶ್ ಆಚಾರ್ಯ ಹಾಗೂ ರಾಂಗೋಪಾಲ್, ಕೋಶಾಧಿಕಾರಿ ಅಂಡಿಂಜೆ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.