ಮಂಗಳೂರು: “ಪಡ್ರೆ ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದ್ದು ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ ಎಂಬವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ದೂರು ನೀಡಿದ್ದು ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿರುತ್ತದೆ. ಆ ದೂರಿನಲ್ಲಿ ಜಾತ್ರೆಯ ಸಮಯ ಭಕ್ತಾದಿಗಳಿಂದ ಸಂಗ್ರಹವಾದ ಸುಮಾರು 6 ಲಕ್ಷ ರೂಪಾಯಿ ಹಣ ಮತ್ತು ಸುಮಾರು 14-15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆ ಸಹಿತ ಇದನ್ನು ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು ಹೋಗಿರುತ್ತಾರೆ ಎಂಬುದಾಗಿ ಕಳ್ಳತನ, ವಂಚನೆ ಪ್ರಕರಣ ದಾಖಲಿಸಿರುತ್ತಾರೆ. ಇದು ಸತ್ಯಕ್ಕೆ ದೂರವಾಗಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಿತಿಯ ಸದಸ್ಯರ ವಿರುದ್ಧ ನಡೆಸಿರುವ ಅಪಪ್ರಚಾರವಾಗಿದೆ. ಸುಳ್ಳು ಆರೋಪ ಮಾಡಿರುವ ಪದ್ಮನಾಭ ಶೆಟ್ಟಿಯನ್ನು ಗ್ರಾಮದ ದೈವ ಜುಮಾದಿಯೇ ನೋಡಿಕೊಳ್ಳಲಿ“ ಎಂದು ಸಮಿತಿಯ ಪರವಾಗಿ ರೂಪೇಶ್ ರೈ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
”ಪಡ್ರೆ ದೈವಸ್ಥಾನದಲ್ಲಿ ವರ್ಷಂಪ್ರತಿ ಮಾಯಿ ಹುಣ್ಣಿಮೆ ಫೆಬ್ರವರಿ/ ಮಾರ್ಚ್ ತಿಂಗಳಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಾ ಬರುತ್ತಿದೆ. ಈ ಜಾತ್ರಾ ಮಹೋತ್ಸವವನ್ನು ಸುಲಲಿತವಾಗಿ ನಡೆಸಲು ತಮಗೆ ಸಹಕಾರಿಯಾಗಲೆಂದು ಪಡ್ರೆಯ ಭಂಡ್ರಿಯಾಲ್ ರವರು ಸುಮಾರು 1974ರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹಕಾರವನ್ನು ಪಡೆದು ಖರ್ಚು ವೆಚ್ಚಗಳನ್ನು ಭರಿಸುವ ಸಂಬಂಧ ಒಂದು ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಗೆ ಯಾವುದೇ ರೀತಿಯ ನೋಂದಾವಣೆಯಾಗಲಿ, ನಿರ್ಧಿಷ್ಟವಾದ ಬೈಲಾ ಆಗಲಿ ಇಲ್ಲದೆ, ಕಾಲಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ಸಮಿತಿಯನ್ನು ರಚಿಸಿಕೊಂಡು ಪ್ರತಿ ವರ್ಷ ಗ್ರಾಮಸ್ಥರ ಸಭೆಯನ್ನು ನಡೆಸಿ ಅದರಲ್ಲಿ ಜಾತ್ರಾ ಮಹೋತ್ಸವದ ಚರ್ಚೆ ಮತ್ತು ಸಮಿತಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದ್ದಲ್ಲಿ ಭಂಡ್ರಿಯಾಲ್ ರವರ ನೇತೃತ್ವದಲ್ಲಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಇಲ್ಲಿಯ ಸಮಿತಿಗೆ ಯಾವುದೇ ನೋಂದಾಯಿತ ಪ್ರಕ್ರಿಯೆ ಇಲ್ಲದೆ ಮೌಖಿಕ ಚರ್ಚೆಯಲ್ಲಿಯೇ ಬಹಳಷ್ಟು ಕೆಲಸಗಳನ್ನು ಮಾಡಿಸಿಕೊಂಡು ಬಂದಿರುತ್ತದೆ. ಸುಮಾರು 12 ವರ್ಷಗಳಿಂದ ಗ್ರಾಮಸ್ಥರ ಸಭೆ ನಡೆಸದೇ ಇದ್ದುದರಿಂದ ಗಡಿ ಪ್ರಧಾನರಾದ ಶ್ರೀ ಬಾಬು ಭಂಡ್ರಿಯಾಲ್ ರವರು ಈ ವರ್ಷ ಗ್ರಾಮಸ್ಥರ ಸಭೆ ಕರೆದು ದೈವಸ್ಥಾನದ ಸುಗಮ ಆಡಳಿತಕ್ಕೆ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ರಚಿಸುವ ಮುನ್ನ ಗ್ರಾಮದ ಸಭೆ ಕರೆಯದಂತೆ ಕೆಲವೊಂದು ವ್ಯಕ್ತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಸಭೆ ನಡೆಸಲು ಅನುಮತಿ ಕೊಟ್ಟಿದ್ದರಿಂದ ಸಭೆ ನಡೆದಿರುತ್ತದೆ“ ಎಂದರು.
”ದೈವಸ್ಥಾನದ ಸಮಿತಿಯ ಸಭೆಯಲ್ಲಿ ಪಾರದರ್ಶಕವಾಗಿ ಗಡಿಪ್ರಧಾನರು ಮತ್ತು ಸದಸ್ಯರ ಮುಂದೆ ಲೆಕ್ಕಪತ್ರವನ್ನು ನೀಡಲಾಗಿರುತ್ತದೆ. ದೈವಸ್ಥಾನಕ್ಕೆ ಹೊಸದಾಗಿ ಧೂಮಾವತಿ ಮತ್ತು ಬಂಟ ದೈವಗಳಿಗೆ ಪಾತ್ರಿಗಳನ್ನು ನೇಮಿಸಿದ್ದು ಸಂಪ್ರದಾಯದಂತೆ ಅವರಿಗೆ ಗಡಿಪ್ರಧಾನರು ಮತ್ತು ಗ್ರಾಮಸ್ಥರ ನಿರ್ಣಯದಂತೆ ಚಿನ್ನದ ಬಳೆಗಳನ್ನು ಹಾಕಲಿರುತ್ತದೆ. ಸಮಿತಿಯ ಬಗ್ಗೆ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರುತ್ತೇವೆ. ತನಿಖೆಯಿಂದ ಯಾವುದೇ ರೀತಿಯ ಅಪರಾಧ ಸಾಬೀತಾಗದೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಮೂಲಕ ಗ್ರಾಮಸ್ಥರ ತೇಜೋವಧೆ ಮಾಡಿರುವುದು ಸರಿಯಲ್ಲ“ ಎಂದು ಹೇಳಿದರು.
ಬಳಿಕ ಮಾತಾಡಿದ ಗಡಿಪ್ರಧಾನರಾದ ಬಾಬು ಭಂಡ್ರಿಯಾಲ್ ಅವರು ”ನಾನು 33 ವರ್ಷಗಳಿಂದ ಗಡಿ ಪ್ರಧಾನರಾಗಿದ್ದೇನೆ. ಇಲ್ಲಿಯವರೆಗೆ ನನ್ನ ಮೇಲೆ ಇಂತಹ ಆರೋಪ ಬಂದಿಲ್ಲ. ಕೋರ್ಟ್ ನಲ್ಲಿ ವಕೀಲರು ರಾಜಿ ಪಂಚಾತಿಕೆ ನಡೆಸೋಣ ಎಂದು ಕರೆದ ಹಿನ್ನೆಲೆಯಲ್ಲಿ ನಾವೆಲ್ಲರೂ ಹೋಗಿದ್ದೆವು. ಅಲ್ಲಿ ಪದ್ಮನಾಭ ಶೆಟ್ಟಿ ಈಗಿರುವ ಸಮಿತಿ ಬರ್ಕಾಸ್ತುಗೊಳಿಸಿ ಹೊಸ ಸಮಿತಿ ರಚಿಸುವಂತೆ ಮತ್ತು ತನ್ನನ್ನು ಅದರಲ್ಲಿ ಸೇರಿಸುವಂತೆ ಕೇಳಿದ್ದ. ಆಗ ನಾನು ಹೊಸ ಸಮಿತಿ ರಚಿಸಿಯಾಗಿದೆ ಈಗ ಸಾಧ್ಯವಿಲ್ಲ ಅಂದಿದ್ದಕ್ಕೆ ನಮ್ಮನ್ನು ಕೆಟ್ಟ ಭಾಷೆಗಳಲ್ಲಿ ನಿಂದಿಸಿದ್ದಾನೆ ಆತನನ್ನು ಪಡ್ರೆ ಜುಮಾದಿ ದೈವವೇ ನೋಡಿಕೊಳ್ಳಲಿ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗಡಿಪ್ರಧಾನರಾದ ಜಗನ್ನಾಥ್ ಅತ್ತಾರ್, ಗೌರವಾಧ್ಯಕ್ಷ ದೇವಣ್ಣ ಶೆಟ್ಟಿ, ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಸತೀಶ್ ಮುಂಚೂರು, ಗಡಿಪ್ರಧಾನರಾದ ದೇವೇಂದ್ರ ಪೂಜಾರಿ, ಯೋಗೀಶ್ ಕೊಂಕಣಬೈಲ್, ಶ್ರೀನಿವಾಸ್ ಗುತ್ತಿನಾರ್, ಬೀರಣ್ಣ ಶೆಟ್ಟಿ ಮುಕ್ಕ, ಸುನೀಲ್, ಸಂಜಯ ಜುಮಾದಿ ಪೂಜಾರಿ, ಧೀರಜ್ ಬಂಟ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.