ಶಿವಮೊಗ್ಗ: ಆಸ್ತಿಯ ವಿಚಾರಕ್ಕೆ ಅಣ್ಣನನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿ ತಮ್ಮನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ನಗರದ ಮೇಲಿನ ತುಂಗಾನಗರದಲ್ಲಿ ಮಣಿಕಂಠ ಎಂಬಾತ ತನ್ನ ಮನೆಯಲ್ಲಿಯೇ ಕೊಲೆಯಾಗಿದ್ದ. ಮಣಿಕಂಠ ಹಾಗೂ ಆತನ ತಮ್ಮ ಸಂತೋಷ್ ಒಟ್ಟಿಗೆ ವಾಸವಾಗಿದ್ದರು. ಮಣಿಕಂಠನ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಸಹೋದರ ಸಂತೋಷ್ ಕಾಣೆಯಾಗಿದ್ದ. ಪೊಲೀಸರು ಸಂತೋಷ್ ನನ್ನು ವಶಕ್ಕೆ ಪಡೆದಿದ್ದು ಈ ವೇಳೆ ಆತ ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದ.
ಘಟನೆಯ ಹಿನ್ನೆಲೆ:
ಮೃತ ಮಣಿಕಂಠ ಹಾಗೂ ಸಂತೋಷ್ ಒಂದೇ ಮನೆಯಲ್ಲಿ ವಾಸವಿದ್ದರು. ಮಣಿಮಂಠನಿಗೆ ಮದುವೆ ಆಗಿರಲಿಲ್ಲ. ಆರೋಪಿ ಸಂತೋಷ್ನಿಗೆ ಮದುವೆ ಆಗಿದ್ದು, ಈತ ಕುಡಿದು ಗಲಾಟೆ ಮಾಡುತ್ತಾನೆಂದು ಹೆಂಡತಿ ಆತನನ್ನು ಬಿಟ್ಟು ಹೋಗಿದ್ದಾಳೆ. ಸಹೋದರರು ವಾಸವಿದ್ದ ಮನೆಯು ಇವರ ತಂದೆಯ ಹೆಸರಿನಲ್ಲಿದೆ. ಹೀಗಾಗಿ, ಮನೆಯ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ ಕುಡಿದುಕೊಂಡು ಬಂದ ಸಂತೋಷ್ ಮಣಿಕಂಠನ ಜೊತೆ ಗಲಾಟೆ ಮಾಡಿದ್ದ. ಬಳಿಕ ಗುದ್ದಲಿಯಿಂದ ಸಂತೋಷ್ ಮಣಿಕಂಠನ ತಲೆಗೆ ಹೊಡೆದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಕುಡಿದ ನಶೆಯಲ್ಲಿದ್ದ ಆರೋಪಿ ಸಹೋದರನ ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದು ಬೆಳಗ್ಗೆ ಎಚ್ಚರವಾಗುತ್ತಿದ್ದಂತೆ ಹೆದರಿ ಪರಾರಿಯಾಗಿದ್ದ.