ಧರ್ಮಸ್ಥಳ: ಧರ್ಮಸ್ಥಳದ ಸಮೀಪದ ಬೆಳಾಲು ಗ್ರಾಮದ ಕುಕ್ಕೊಟ್ಟುವಿನ ವೀಣಾ(19) ಎನ್ನುವ ಯುವತಿ ಅನುಮಾನಸ್ಪದವಾಗಿ ಸಾವು ಕಂಡಿದ್ದಾಳೆ. ಕಳೆದ ಜುಲೈ 11 ರಂದು ವೀಣಾಳ ಮೃತದೇಹ ಮನೆಯ ಪಕ್ಕದ ಕೆರೆಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಧರ್ಮಸ್ಥಳ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕುಕ್ಕೊಟ್ಟು ನಿವಾಸಿ ನಾಗೇಶ್- ಭಾರತಿ ದಂಪತಿಗಳ ಎರಡನೇ ಪುತ್ರಿ ವೀಣಾ (19) ಅನುಮಾನಾಸ್ಪದವಾಗಿ ಮೃತಪಟ್ಟ ಹುಡುಗಿ.
ವೀಣಾ ಅವರು ಕಳೆದ ಮೇ.10ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಆಕೆಯ ಪತ್ತೆಗಾಗಿ ಪ್ರಕಟಣೆ ಹೊರಡಿಸಿದ್ದರು. ಆದಾದ ಕೆಲವೇ ದಿನಗಳಲ್ಲಿ ಆಕೆ ಪತ್ತೆಯಾಗಿದ್ದರು. ಬಳಿಕ ಅವರು ಮನೆಯಲ್ಲಿದ್ದರು. ಈಗ ವೀಣಾ ಅವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.
ನಾಗೇಶ-ಭಾರತಿ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ವೀಣಾ ಎರಡನೇ ಪುತ್ರಿಯಾಗಿದ್ದು ಅವಳಿಗೆ ಮಾನಸಿಕ ಖಾಯಿಲೆ ಇದ್ದು ಆಕೆಗೆ ಪುತ್ತೂರಿನ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ವೀಣಾಗೆ ಒಂದೂವರೆ ತಿಂಗಳ ಮಗು ಇದ್ದು ಈಕೆಯ ಅನಾರೋಗ್ಯದ ಕಾರಣದಿಂದ ಮಗುವನ್ನು ಸುಬ್ರಹ್ಮಣ್ಯ ಸಂಬಂಧಿಗಳ ಮನೆಯಲ್ಲಿ ಬಿಡಲಾಗಿತ್ತಯ ಎಂದು ಮನೆಯವರು ತಿಳಿಸಿದ್ದಾರೆ.
ಎಂದಿನಂತೆ ಮನೆಯಲ್ಲಿಯೇ ಇದ್ದ ಹುಡುಗಿ ನಾಪತ್ತೆಯಾಗಿದ್ದಳು. ಈ ಬಗ್ಗೆ ನಾಗೇಶ್ ದೂರು ನೀಡಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿದ್ದರು. ಮನೆಯವರು ಅಷ್ಟರಲ್ಲಿ ಹುಡುಕಾಟ ನಡೆಸಿದಾಗ ಕೆರೆಯ ನೀರಿನ ಆಳವಾದ ಭಾಗದಲ್ಲಿ ವೀಣಾಳ ಮೃತದೇಹ ಪತ್ತೆಯಾಗಿದೆ ಎಂದು ನಾಗೇಶ್ ಅವರಿಗೆ ಕರೆ ಮಾಡಿ ತಿಳಿಸಿದ್ದರು.ಬಳಿಕ ಅಗ್ನಿಶಾಮಕ ಮತ್ತು ತಂಡದವರು ಸೇರಿ ಮೃತದೇಹ ಹೊರತೆಗೆದಿದ್ದಾರೆ ಎಂದು ತಂದೆ ನಾಗೇಶ್ ತಿಳಿಸಿದ್ದಾರೆ.
ಸಮಗ್ರ ತನಿಖೆಗೆ ಮನವಿ: ವೀಣಾಳ ಅನುಮಾನಾಸ್ಪದ ಸಾವಿನ ಕುರಿತು ಹಲವಾರು ಅನುಮಾನಗಳಿದ್ದು ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಬೆಳ್ತಂಗಡಿ ತಾಲೂಕು ಸಮಿತಿ ಇದರ ವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮನವಿ ನೀಡಲಾಗಿದೆ. ಬಾಣಂತಿಯಾದ ಈಕೆಯ ಮಗುವನ್ನು ಅವಳಿಂದ ದೂರ ಮಾಡಿ ಆಕೆಯ ತಂದೆ ನಾಗೇಶ್ ರವರು ಆಕೆಯನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಕಾರ್ಯವನ್ನು ಮಾಡಿದ್ದಾರೆ. ಒಟ್ಟು ಘಟನೆಯನ್ನು ಗಮನಿಸದಾಗ ಇದೊಂದು ಸಹಜ ಸಾವು ಅಲ್ಲ ಎಂಬ ಭಾವನೆ ಮೂಡುತ್ತಿದೆ. ಆದ್ದರಿಂದ ಯುವತಿಯ ಅಸಹಜ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಮಾಡಿ ಈಕೆಯ ಸಾವಿಗೆ ಕಾರಣರಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.