ಕೊಪ್ಪ: ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಕೆರೆ ಪ್ರದೇಶದ ಕೆರೆಮನೆ ಎಂಬಲ್ಲಿ ಎರಡು ಅಪರೂಪದ ಸ್ಮಾರಕಶಿಲ್ಪಗಳು ಪತ್ತೆಯಾಗಿದ್ದು, ಇದರಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದೆ.
ಇಲ್ಲಿನ ಶಾಂತ ಶ್ರೀನಿವಾಸ ಗೌಡ ಮತ್ತು ಕೆರೆಮನೆ ಸುರೇಶ ಅವರ ಜಮೀನಿನಲ್ಲಿ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಈ ಸ್ಮಾರಕಶಿಲ್ಪವನ್ನು ಹೊರತೆಗೆದು ಇತಿಹಾಸ ಮತ್ತು ಪುರಾತತ್ತ್ವ ಸಂಶೋಧಕ ನ.ಸುರೇಶ ಕಲ್ಕೆರೆ ಅವರಿಗೆ ತಿಳಿಸಿದ್ದರು. ನ.ಸುರೇಶ ಕಲ್ಕೆರೆ
ಜಮೀನನ್ನು ಶೋಧಿಸಿದಾಗ ಇನ್ನೊಂದು ಸ್ಮಾರಕಶಿಲ್ಪವು ದೊರೆತಿದೆ. ಎರಡೂ ಕಲ್ಲುಗಳನ್ನು ಸ್ವಚ್ಛಗೊಳಿಸಿ, ಪರಿಶೀಲಿಸಿದಾಗ ಒಂದೇ ರೀತಿಯ ಸಾಮ್ಯತೆ ಕಂಡುಬಂದಿತು.
ಸ್ಮಾರಕ ಶಿಲ್ಪಗಳ ವಿಶೇಷತೆಗಳು:
ಈ ಸ್ಮಾರಕಶಿಲ್ಪಗಳು ಸುಮಾರು ಎರಡು ಅಡಿ ಉದ್ದ ಹಾಗೂ ಒಂದು ಅಡಿ ಅಗಲವಾಗಿದೆ. ಇವುಗಳು ಸುಮಾರು 300 00 ಮೀ. ಅಂತರದಲ್ಲಿ ಪತ್ತೆಯಾಗಿದೆ. ಸ್ಮಾರಕಶಿಲ್ಪದ ಮಧ್ಯಭಾಗದಲ್ಲಿ ತ್ರಿಶೂಲ ಹಾಗೂ ಇದರ ಇಕ್ಕೆಲಗಳಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದೆ. ಇಡೀ ಕೊಪ್ಪ ತಾಲೂಕಿನಲ್ಲಿಯೇ ಇವುಗಳು ಪ್ರಥಮವಾಗಿ ಕಂಡುಬಂದಿರುವ ಅಪರೂಪದ ಸ್ಮಾರಕಶಿಲ್ಪಗಳಾಗಿದೆ. ಈ ಊರಿನ ಹೆಸರೇ ತುಳುವಿನಕೊಪ್ಪವಾಗಿದ್ದು, ತುಳು ಇತಿಹಾಸಕ್ಕೂ ಇದಕ್ಕೂ ಏನಾದರೂ ಸಂಬಂಧವಿರಬಹುದೇ ಎನ್ನುವ ಸಂಶೋಧನೆ ನಡೆವಸುಂತೆ ಇತಿಹಾಸ ಆಸಕ್ತರು ವಿದ್ವಾಂಸರಲ್ಲಿ ವಿನಂತಿಸಿದ್ದಾರೆ.
ಕಡಬಕ್ಕೂ ತುಳುವಿನಕೊಪ್ಪಕ್ಕೂ ಏನದು ಹೋಲಿಕೆ?:
ಇದೀಗ ತುಳುವಿನಕೊಪ್ಪದಲ್ಲಿ ಪತ್ತೆಯಾದ ಈ ಶಿಲ್ಪ ಲಕ್ಷಣದ ಹೋಲಿಕೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಪ್ರದೇಶದಲ್ಲಿನ ಶ್ರೀದುರ್ಗಾ ದೇವಾಲಯದ ಒಳ ಪ್ರಾಕಾರದಲ್ಲಿಯೂ ಕಂಡುಬಂದಿದೆ. ಇದು 15ನೇ ಶತಮಾನದ ದಾನ ಶಾಸನವಾಗಿದ್ದು, ಇದರಲ್ಲಿ ಸೂರ್ಯ-ಚಂದ್ರರ ಬದಲು ಶಂಖ-ಚಕ್ರದ ಕೆತ್ತನೆ ಇದೆ.
ತುಳುವಿನಕೊಪ್ಪದ ಕಲ್ಕೆರೆ ಪ್ರದೇಶದಲ್ಲಿ ಪತ್ತೆಯಾದ ಸ್ಮಾರಕದ ಸ್ಥಳದಲ್ಲಿ ಕಲ್ಲಿನ ಪ್ರಾಚೀನ ತಳಪಾಯ ಕಂಡು ಬಂದಿದ್ದು, ಇದು ದೇವಿ ಸಂಬಂಧಿಸಿದ ದೇವಾಲಯದ ನೆಲೆಗಟ್ಟು ಆಗಿರಬಹುದು ಎನ್ನುವುದು ಇಲ್ಲಿನ ಸ್ಥಳೀಯರ ನಂಬಿಕೆಯಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಒಳಪಡಿಸಲಾದ ಈ ಸ್ಮಾರಕಶಿಲ್ಪಗಳು 14-15ನೇ ಶತಮಾನದಲ್ಲಿ ಹಾಕಿರಬಹುದಾದ ಗಡಿಕಲ್ಲು ಆಗಿರಬಹುದೆಂದು ಇತಿಹಾಸ ಸಂಶೋಧಕ ಅಭಿಪ್ರಾಯಿಸಿದ್ದಾರೆ. ಪೂರ್ವಕಾಲದಲ್ಲಿ ಈ ಪ್ರದೇಶದಲ್ಲಿ ದೇವಸ್ಥಾನವಿದ್ದು, ಅದೀಗ ಅಜೀರ್ಣಾವಸ್ಥೆಗೆ ತಲುಪಿರುವ ಸಾಧ್ಯತೆ ಇದೆ.
ತುಳುವಿನಕೊಪ್ಪದ ಗ್ರಾಪಂ ಉದ್ಯೋಗಿ ಮಹೇಶ್, ಕಲ್ಕೆರೆ ಸುಂದರರಾಜ್, ರಾಘವೇಂದ್ರ ಹಾಗೂ ಕಲ್ಕೆರೆ ಶಾಲೆಯ ವಿದ್ಯಾರ್ಥಿಗಳಾದ ಸನ್ನಿಧಿ ಮತ್ತು ವಿಕೃತ್ ಸಂಶೋಧಕರಿಗೆ ಸಹಕಾರ ನೀಡಿದರು.