ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಚಟದಿಂದ ತಂದೆಯ ಆಸ್ತಿ ಮಾರಾಟ ಮಾಡಿದ್ದಲ್ಲದೆ ಟೆಕ್ಕಿ ಕೆಲಸ ಬಿಟ್ಟು ಕಳ್ಳತನಕ್ಕಿಳಿದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಕೆ.ಎ.ಮೂರ್ತಿ(27) ಎಂದು ಹೆಸರಿಸಲಾಗಿದೆ. ಈತ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉತ್ತಮ ವೇತನದ ಉದ್ಯೋಗದಲ್ಲಿದ್ದ. ಆದರೆ, ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳ ಆಕರ್ಷಣೆಯಿಂದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ತನ್ನ ತಂದೆಯ ಶಿವಮೊಗ್ಗದಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿದ. ಕೊನೆಗೆ ಕೆಲಸವನ್ನು ತೊರೆದು ಬೇಗನೆ ಹಣ ಸಂಪಾದನೆ ಮಾಡಲು ಕಳ್ಳತನಕ್ಕಿಳಿದು ಪೊಲೀಸರ ವಶವಾದ.
ಆರೋಪಿ ಇತ್ತೀಚೆಗೆ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಬಂಗಾರದ ಸರವನ್ನು ಕಿತ್ತುಕೊಂಡು ಓಡಿಹೋಗುವಾಗ ಮಾಗಡಿ ರಸ್ತೆ ಪೊಲೀಸರು ಆತನನ್ನು ಬಂಧಿಸಿದರು. ಈ ವೇಳೆ ಮೂರ್ತಿ ಕೋಣನಕುಂಟೆ, ಅವಲಹಳ್ಳಿ, ಮತ್ತು ಸದ್ದುಗುಂಟರಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನ್ನು ಬಾಯ್ಬಿಟ್ಟಿದ್ದ. ಆತನಿಂದ 245 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.