ಮಂಗಳೂರು: ಈ ನೆಲದ ಮೂಲ ಅಸ್ಮಿತೆ ದೈವಾರಾಧನೆಯಾಗಿದೆ. ಅತಿ ಪ್ರಾಚೀನ ದೈವಗಳ ನುಡಿಗಟ್ಟುಗಳಲ್ಲಿಯೂ ʻಮಂಗಳೂರುʼ ಎಂಬ ಹೆಸರು ಬರುತ್ತದೆ. ʻಮಾನಿಮಂಗಾರದಯರಮನೆಡ್ ಉಲ್ಲೆರ್ ಬಾಲೆಂದರಸು ಮೂವಂದರ್ವತ್ತನ ತೊಟ್ಟಿಲ್ಡ್ ದೀಯೆರಾನಗ ಪಂತಿ ಪರಕೆ ಕಟ್ಟಿದಿ ಮುಡಿಪುʼ ಎಂಬ ನುಡಿಗಟ್ಟು ಬಲವಾಂಡಿ ದೈವದ ಪಾಡ್ದನದಲ್ಲಿ ಬರುತ್ತದೆ. ಮಲರಾಯ ದೈವದ ಒಂದು ನುಡಿಗಟ್ಟಿನಲ್ಲಿ, ʻಪುತ್ತೆದ ಕರ್ತುಲೆಗ್ ಪುತ್ತೆಡ್ ಸಿಂಹಾಸನ…, ಬಂಗಾರದ ಕರ್ತುಲೆಗ್ ಬಂಗಾರ್‌ದ ಸಿಂಹಾಸನʼ ಎಂದು ಬರುತ್ತದೆ. ಹಾಗಾಗಿ ʻಮಂಗಾರʼ ಎನ್ನುವ ಶಬ್ದವೇ ʻಮಂಗಳೂರುʼ ಆಗಿ ಪರಿವರ್ತನೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಹೆಚ್ಚು ಸೂಕ್ತವೆನಿಸುತ್ತಿದೆ ಎಂದು ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು.
ಮಂಗಳೂರಿನ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ʻಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿʼ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜಿಡಿಎಸ್ ನಾಯಕರು, ತುಳು ಹೋರಾಟಗಾರರ ಪ್ರಮುಖರು, ಎಲ್ಲರೂ ಜಂಟಿಯಾಗಿ ಕುಳಿತು ಪತ್ರಿಕಾ ಗೋಷ್ಠಿ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಗೆ ʻಮಂಗಳೂರು ಜಿಲ್ಲೆʼ ಎಂದು ಹೆಸರಿಡುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಯಾನಂದ ಕತ್ತಲ್ಸಾರ್, ನಮ್ಮ ನೆಲವನ್ನು ಆಕ್ರಮಿಸಿ ನಮ್ಮನ್ನು ದಾಸ್ಯಕ್ಕೆ ದೂಡಿ ಪರತಂತ್ರರನ್ನಾಗಿಸುವ ಹುನ್ನಾರವನ್ನು ಮಾಡಿದ ಪೋರ್ಚುಗೀಸರು ಮತ್ತು ಬ್ರಿಟಿಷರು ನೀಡಿದ ಬಳುವಳಿ ಹೆಸರೇ ಕೆನರಾ. ಮುಂದೆ ಈ ಕೆನರಾ ವಿಭಜನೆಗೊಂಡು ‘ನಾರ್ತ್ ಕೆನರಾ’ ʻಸೌತ್ ಕೆನರಾ’ ಆಗಿ ಮುಂದೆ ಇದು ಅಪಭ್ರಂಶವಾಗಿ ʻಕನ್ನಡ’ವಾಗಿ ಬದಲಾಯಿತು. ದಾಸ್ಯದ ಸಂಕೋಲೆಯಿಂದ ನಮ್ಮ ದೇಶ ಮುಕ್ತಿ ಪಡೆದರೂ ಇನ್ನೂ ನಮ್ಮ ಅನೇಕ ನಗರಗಳು ಅರ್ಥವಿಲ್ಲದ ವಸಾಹತುಶಾಹಿಗಳ ನಿಶಾನೆ ಎಂಬಂತೆ ಅವರು ನೀಡಿದ ಹೆಸರುಗಳಿಗೆ ಒಗ್ಗಿಕೊಂಡಿರುವುದು, ಅಂತಹ ಹೆಸರಿನಲ್ಲಿ ಇನ್ನೂ ಆಡಳಿತ ನಡೆಸುತ್ತಿರುವುದಕ್ಕೆ ‘ದಕ್ಷಿಣ ಕನ್ನಡ’ ಸಾಕ್ಷಿ. ಸುಮಾರು 2000 ವರ್ಷಗಳಿಂದ ದಾಖಲಾತ್ಮಕ ಇತಿಹಾಸವಿರುವ ನಮ್ಮ ಜಿಲ್ಲೆಗೆ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಹೆಸರುಗಳಿದ್ದವು. ಸಾರ್ವತ್ರಿಕವಾಗಿ ತುಳುನಾಡು ಎಂದು ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಹೆಸರು ಇತ್ತು. ಸುಮಾರು 2000 ವರ್ಷಗಳ ಹಿಂದೆ ತಮಿಳಿನ ಸಂಗಂ ಸಾಹಿತ್ಯವಾದ ʻಅಗನಾನೂರು’ ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿರುವುದು ನಮ್ಮ ಪ್ರದೇಶದ ಪುರಾತನ ದಾಖಲೆಯಾಗಿದೆ. ಮುಂದೆ ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ವಿಷಯ, ತುಳು ದೇಶ, ತುಳು ರಾಜ್ಯ ಎಂದು ನಮ್ಮ ಅವಿಭಜಿತ ಜಿಲ್ಲೆಗಳನ್ನು ಗುರುತಿಸಿರುವುದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿರುವ ದಾಖಲೆ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಂಗಳೂರು ರಾಜ್ಯ, ಬಾರ್ಕೂರು ರಾಜ್ಯ ಎಂದು ಈಗಿರುವ ತುಳುನಾಡನ್ನು ವಿಭಾಗಿಸಿ ಆಡಳಿತಾತ್ಮಕವಾಗಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯನ್ನು ʻಮಂಗಳೂರು ರಾಜ್ಯ’ವನ್ನಾಗಿಸಿರುವುದು ಮಂಗಳೂರು ಎಂಬ ಹೆಸರಿಗಿರುವ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಷ್ಟಲ್ಲದೆ ಅನೇಕ ವಿದೇಶಿ ವಿದ್ವಾಂಸರು ತಮ್ಮ ದಾಖಲೆಗಳಲ್ಲಿ ಮಂಗಳೂರನ್ನು ಉಲ್ಲೇಖಿಸಿರುತ್ತಾರೆ. 1931 ರಲ್ಲಿ ಎಸ್.ಯು. ಪಣಿಯಾಡಿಯವರು ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಜಿಲ್ಲೆ ಎಂಬ ಹೆಸರಿಡಬೇಕೆಂದು ಜಿಲ್ಲಾ ಪರಿಷತ್‌ನಲ್ಲಿ ಮಂಡಿಸಿದಾಗ ಜಿಲ್ಲೆಗೆ ʻಮಂಗಳೂರು’ ಎಂದು ಹೆಸರಿಡಬೇಕೆಂಬ ಕೂಗು ಅಲ್ಲಿನ ಪರಿಷತ್ ಸದಸ್ಯರಿಂದ ಬಂದಿತ್ತು.
ವಿಜಯನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು. ಪ್ರಸ್ತುತ ತಾಲೂಕಿಗೆ ಸೀಮಿತವಾದ ಮಂಗಳೂರು ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕೆಂದು ಪಕ್ಷಾತೀತವಾಗಿ ರಾಜಕಾರಣಿಗಳು ಸಾಮಾಜಿಕ ಚಿಂತಕರು, ತುಳುವರು ಮತ್ತು ಧಾರ್ಮಿಕ ಮುಖಂಡರ ಬೇಡಿಕೆಯಾಗಿದೆ. ತಾಲೂಕು ಕೇಂದ್ರದ ಹೆಸರನ್ನು ಇಡೀ ಜಿಲ್ಲೆಗೆ ಇಟ್ಟ ಸಾಕಷ್ಟು ಉದಾಹರಣೆಗಳು ಇವೆ. ಧರ್ಮಾತೀತವಾಗಿ ಜಿಲ್ಲೆಯ ಹೊರಗೆ, ದೇಶ ವಿದೇಶಗಳಲ್ಲಿ ಇಲ್ಲಿನ ಮೂಲ ನಿವಾಸಿಗಳನ್ನು ಮಂಗಳೂರಿನವರಿಂದ ಗುರುತಿಸುತ್ತಿರುವುದು, ಮಂಗಳೂರು ನಗರದ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿ ಬ್ರಾಂಡ್ ಮಂಗಳೂರಿಗೆ ಸಹಕಾರಿ, ಜಿಲ್ಲೆಯ ಎಲ್ಲರೂ ಒಪ್ಪುವಂತಹ ಹೆಸರು ಮಂಗಳೂರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರು ಯಾಕೆ ಇಡಬೇಕು ಎನ್ನುವುದನ್ನೂ ಮಾಧ್ಯಮಗಳ ಮುಂದೆ ತಂದರು.
ಮಾನಿಮಂಗಾರವೇ ಮುಂದೆ ಮಂಗಳೂರು ಆಯ್ತು:
ಮಂದುವರಿದು ಮಾತನಾಡಿದ ಕತ್ತಲ್ಸಾರ್, ಮಂಗಳೂರು ಹೆಸರಿನ ವ್ಯುತ್ತಪ್ತಿಯ ವಿವರಣೆ ನೀಡಿದರು. ಮಂಗಳೂರು ಶಬ್ದದ ಮೂಲ ಮಂಗಾರ ಅಂದರೆ ಬಂಗಾರ. ಕೆಲವೊಂದು ಶಬ್ದಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತದೆ. ಬಂಗಾರ್‌ಗುತ್ತು, ಬಂಗಾರದ ತೆನೆ ಹುಟ್ಟಿದಂತಹಾ ನಾಡಿದು. ಮಂಗಳೂರು ರಾಜ್ಯ ಎನ್ನುವ ಉಲ್ಲೇಖವನ್ನೂ ಕೊಟ್ಟಿದ್ದೇವೆ ಎಂದರು.
ಆಗ ಪತ್ರಕರ್ತರೊಬ್ಬರು ಮಂಗಾರ ಹೋಗಿ ಮಂಗಳೂರು ಹೇಗಾಯ್ತು? ಎಂದು ಪ್ರಶ್ನಿಸಿದರು. ಎಸ್.ಯು. ಪಣಿಯಾಡ್ ಅವರು ಜಿಲ್ಲೆಗೆ ʻತುಳುನಾಡುʼ ಅಂತ ಹೆಸರಿಡಬೇಕು ಎಂದು ಕೇಳಿದ್ದರೆ, ನೀವು ಮಂಗಳೂರು ಅಂತ ಯಾಕೆ ಹೇಳ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕತ್ತಲ್‌ಸಾರ್, ಇಲ್ಲಿನ ಅನೇಕರಿಗೆ ಜಿಲ್ಲೆಯ ಹೆಸರು ಕುಡ್ಲ ಆಗ್ಬೇಕು, ತುಳುನಾಡು ಆಗ್ಬೇಕು ಅಂಬ ಭಾವನೆ ಇದೆ. ಆದರೆ ಸಾರ್ವತ್ರಿಕವಾಗಿ ಜನರ ಭಾವನೆಯನ್ನು ಸಂಗ್ರಹಿಸಿದಾಗ ಹೆಚ್ಚಿನ ಜನರು ತುಳುನಾಡು ಆಗ್ಬೇಕು ಎಂದು ಒಲವು ವ್ಯಕ್ತಪಡಿಸಿದ್ದಾರೆ. ಗೂಗಲ್ ಮೀಟ್ ಅಲ್ಲಿ ಸಮೀಕ್ಷೆ ಮಾಡಿದಾಗ ಹೆಚ್ಚಿನ ಮಂದಿ ಈ ಹೆಸರು ಪ್ರಸ್ತಾಪಿಸಿದ್ದರು, ಮುಂದೆಯೂ ಸಮೀಕ್ಷೆ ಮಾಡುತ್ತೇವೆ ಎಂದರು.
ಈ ವೇಳೆ ಮಧ್ಯೆ ಮಾತಾಡಿದ ರಾಜ್ಯ ಬಿಜೆಪಿ ಸಹ ಸಂಚಾಲಕ ಕಿರಣ್ ಕುಮಾರ್ ಕೋಡಿಕಲ್, ತುಳುನಾಡಿನಲ್ಲಿ ಉಡುಪಿ, ಕಾಸರಗೋಡು ಬರುತ್ತದೆ. ಜನಾಭಿಪ್ರಾಯದ ಪ್ರಕಾರ ಮಂಗಳೂರು ಜಿಲ್ಲೆ ಅಂತ ಬಂದಿದೆ ಎಂದರು. ಆಗ ಮಾತಾಡಿದ ಬಾವಾ, ಬಿಜಾಪುರ ಇದ್ರೆ ಬಿಜಾಪುರ, ಬಳ್ಳಾರಿ ಇದ್ರೆ ಬಳ್ಳಾರಿ ಜಿಲ್ಲೆ ಅಂತ ಸಣ್ಣ ನಗರಗಳ ಹೆಸರನ್ನೇ ಜಿಲ್ಲೆಗೆ ಇಟ್ಟಿದ್ದಾರೆ. ಉಡುಪಿಯಲ್ಲಿ ಕಾರ್ಕಳ, ಕುಂದಾಪುರ ಇದ್ರೂ ಆ ಜಿಲ್ಲೆಗೆ ಉಡುಪಿ ಜಿಲ್ಲೆ ಅಂತ ಹೆಸರಿಡಲಾಗಿದೆ ಎಂದು ಎಲ್ಲರೂ ಒಗ್ಗೂಡಿ ಸಮಜಾಯಿಷಿ ಕೊಟ್ಟರು.
ಈ ವೇಳೆ ಮಾತನಾಡಿದ ಕತ್ತಲ್ಸಾರ್, ಮಂಗಳೂರು ಶಬ್ದಕ್ಕೂ ಪಾಡ್ದನಕ್ಕೂ ಹೇಗೆ ತಾಳೆಯಾಗುತ್ತದೆ ಎಂದರೆ ಮಂಗಾರಕ್ಕೂ ಮಂಗಳೂರಿಗೂ ಸ್ವಲ್ಪ ವ್ಯತ್ಯಾಸವಿದೆ ಅಷ್ಟೆ. ಮಾನಿಮಂಗಾರದಿಂದಲೇ ಮಂಗಳೂರು ಹೆಸರು ಬಂದಿದೆ. ಅದರಿಂದಲೇ ಮಂಗಳಾಪುರ ಆಯ್ತು, ಮಂಗಳಾದೇವಿ ಆಯ್ತು. ಅಂತಹ ವ್ಯತ್ಯಾಸ ಆಗಿದ್ದಕ್ಕೆ ಇನ್ನೊಂದು ಉಲ್ಲೇಖ ಕೊಡುತ್ತೇನೆ. ಬಿಕರ್ನಕಟ್ಟೆಯ ಮೂಲ ಹೆಸರು ಬಿಕ್ಕೂರು ನಾಯಿಗಳ ಕಟ್ಟೆ ಅಂತ ಇತ್ತು, ಈಗ ಅದು ಬಿಕರ್ನಕಟ್ಟೆ ಆಗಿದೆ ಎಂದರು.
ಆಗ ನಡುವೆ ಧ್ವನಿಗೂಡಿಸಿದ ಬಸ್ ಮಾಲಕರ ಸಂಘದ ದಿಲ್‌ರಾಜ್ ಆಳ್ವ, ಮಂಗಳೂರು ಹೇಗೆ ಬಂತು ಎಂದು ಸಹಜವಾಗಿಯೇ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಹಾಗಾದರೆ ತಾವೇ ದಕ್ಷಿಣ ಕನ್ನಡ ಯಾಕೆ ಆಗ್ಬೇಕು ಎಂದು ನೀವೇ ಹೇಳಿ ಎಂದು ಮರುಪ್ರಶ್ನಿಸಿದರು.
ದಿಲ್ ರಾಜ್ ಮಾತಾಡಿ, ಇಲ್ಲಿನ ಡಿಸಿ ಅಮೆರಿಕಾಕ್ಕೆ ಹೋಗಿದ್ದಾಗ ಅವರು ಅಧಿಕೃತವಾಗಿ ದಕ್ಷಿಣ ಕನ್ನಡದ ಡಿಸಿ ಎಂದು ಉಲ್ಲೇಖ ಮಾಡಿರಲಿಲ್ಲ, ನಾನು ಕುಡ್ಲದ ಡಿಸಿ ಎಂದಿದ್ದರು. ಈ ವೇಳೆ ಮಾತಾಡಿದ ಕತ್ತಲ್ಸಾರ್, ನಾವು ಮಂಗಳೂರಿನ ಹೆಸರನ್ನು ಏಕಪಕ್ಷೀಯವಾಗಿ ಸೂಚಿಸಿಲ್ಲ, ತುಳುಪರ ಹೋರಾಟಗಾರರು, ಜನಾಂಗೀಯ ಹೋರಾಟಗಾರರು, ಧಾರ್ಮಿಕ ಮುಖಂಡರು, ರಾಜಕೀಯ ನೇತಾರರ ಒಟ್ಟು 600 ಮಂದಿಯ ಜೊತೆ ಗೂಗಲ್ ಮೀಟ್ ಮಾಡುವಾಗ ಅದರಲ್ಲಿ ಅತಿ ಹೆಚ್ಚಿನವರು ವಿಮರ್ಶಿಸಿ ಮಂಗಳೂರೇ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದರು.
ನಮ್ಮ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟತೆ ಇದೆ. ನಮ್ಮದು ಏಕಮುಖ ನಿರ್ಧಾರ ಅಲ್ಲ. ಗೂಗಲ್ ಮೀಟ್ ಚರ್ಚೆ ನಡೆಸಿದ್ದು, ಮುಂದೆಯೂ ಚರ್ಚೆ ನಡೆಸಿ, ಆರೋಗ್ಯಕರ ಚರ್ಚೆ ನಡೆಸಿ ಯಾವ ಹೆಸರಿಗೆ ಹೆಚ್ಚಿನ ಆಶಯ ವ್ಯಕ್ತವಾಗುತ್ತದೀ ಬರುತ್ತದೋ ಅದಕ್ಕೆ ನಾವು ಒಪ್ಪುತ್ತೇವೆ. ಹೆಚ್ಚಿನವರ ಅಭಿಪ್ರಾಯ ಮಂಗಳೂರು ಆಗಿತ್ತು. ಇದಕ್ಕೆ ಪೂರಕವಾಗಿ ಶಿಲಾ ಶಾಸನ, ಪಾಡ್ದನ, ರಾಜಕೀಯ ಉಲ್ಲೇಖ ಇತ್ಯಾದಿಗಳನ್ನು ಕ್ರೋಡಿಕರಿಸಿ ಮಂಗಳೂರು ಜಿಲ್ಲೆ ಆಗ್ಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ ಎಂದರು.
ಎಸ್.ಯು. ಪಣಿಯಾಡಿ ಅವರು ʻತುಳುನಾಡು ಜಿಲ್ಲೆʼ ಆಗ್ಬೇಕು ಅಂತ ಬೇಡಿಕೆ ಇಟ್ಟಾಗ ಹೆಚ್ಚಿನವರು ಈ ಜಿಲ್ಲೆಗೆ ತುಳುನಾಡು ಅಥವಾ ಕುಡ್ಲ ಆಗ್ಬೇಕು ಅಂದಿದ್ದರು. ಆದರೆ ಸಾರ್ವತ್ರಿಕ ಜನರ ಮನಸ್ಸಿನ ಭಾವನೆ ಸಂಗ್ರಹಿಸುವಾಗ ಮಂಗಳೂರಿಗೆ ಹೆಚ್ಚಿನ ಒಲವು ಮೂಡಿದೆ. ನಾವು ಗೂಗಲ್ ಮೀಟ್ ಅಲ್ಲಿ 600 ಮಂದಿಯ ಸಮೀಕ್ಷೆ ಮಾಡಿದ್ದೆವು, ಇನ್ನೂ ಸಮೀಕ್ಷೆ ಮಾಡಲಿದ್ದೇವೆ ಎಂದರು. ನಾವು ಪಾಡ್ದನಗಳನ್ನು ತಾಳೆ ನೋಡಿದಾಗ, ಮಾನಿಮಂಗಾರಕ್ಕೂ ಮಂಗಳೂರು ಶಬ್ದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಮಂಗಳಾದೇವಿಯ ಹೆಸರನ್ನೂ ಮಂಗಳೂರು ಸೂಚಿಸುತ್ತದೆ ಎಂದರು.
ಬಿಜೆಪಿಯ ರಾಜ್ಯ ಸಹ ಸಂಚಾಲಕ ಕಿರಣ್ ಕುಮಾರ್ ಕೋಡಿಕಲ್ ಈ ಮಧ್ಯೆ ಮಾತನಾಡಿ, ತುಳುನಾಡು ವ್ಯಾಪ್ತಿಯಲ್ಲಿ ಬೇರೆ ಜಿಲ್ಲೆಗಳೂ ಬರುತ್ತದೆ. ಹಾಗಾಗಿ ದಕ್ಷಿಣ ಕನ್ನಡಕ್ಕೆ ಮಂಗಳೂರು ಜಿಲ್ಲೆ ಇಡುವುದು ಸೂಕ್ತ ಎಂದರು. ಮಂಗಳೂರಿಗೂ ಮಾನಿ ಮಂಗಾರಕ್ಕೂ ಎಷ್ಟು ವ್ಯತ್ಯಾಸವಿದೆಯಲ್ವಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಇನ್ನೊಂದು ಉಲ್ಲೇಕ ನೀಡಿದ ಕತ್ತಲ್‌ಸಾರ್, ಹೆಸರುಗಳು ಕಾಲ ಕಾಲಕ್ಕೆ ಬದಲಾಗುತ್ತಾ ಸಾಗುತ್ತದೆ ಉದಾಹರಣೆಗೆ ಬಿಕರ್ನಕಟ್ಟೆ ಮೊದಲು ಬಿಕ್ಕೂರು ನಾಯಿಗಳ ಕಟ್ಟೆ ಆಗಿತ್ತು ಎಂದರು.
ತುಳುವನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಹೋರಾಟವನ್ನೂ ಮುಂದುವರಿಸುತ್ತೇವೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.
ಈ ವೇಳೆ ತುಳುವೆರ್ನ ಸ್ವಾಭಿಮಾನದ ದುನಿಪು ಎಂಬ ಸ್ಟಿಕರ್ ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಅಕ್ಷಿತ್ ಸುವರ್ಣ, ಕಸ್ತೂರಿ ಪಂಜ, ಪ್ರದೀಪ್ ಸರಿಪಲ್ಲ, ಭರತ್ ಕುಮಾರ್, ಯೋಗೀಶ್ ಶೆಟ್ಟಿ ಜೆಪ್ಪು ರೋಹನ್ ಮೊದಲಾದವರು ಉಪಸ್ಥಿತರಿದ್ದರು.
ನಾವು ದಕ್ಷಿಣ ಭಾಗದಲ್ಲಿದ್ದೇವಾ? ರಕ್ಷಿತ್ ಶಿವರಾಂ
ಬ್ರಿಟಿಷರ ಬಳುವಳಿ ಹೆಸರೇ ದಕ್ಷಿಣ ಕನ್ನಡ. ಬದಲಾವಣೆ ಜಗದ ನಿಯಮ ದಕ್ಷಿಣ ಕನ್ನಡ ಜಿಲ್ಲೆ ನಿಜವಾಗಿಯೂ ದಕ್ಷಿಣ ಭಾಗದಲ್ಲಿದೆಯಾ? ಕರ್ನಾಟಕದ ದಕ್ಷಿಣ ಭಾಗ ಚಾಮರಾಜನಗರವಾಗಿದೆ. ಆದರೆ ನಮ್ಮದು ನಮ್ಮದು ಪಶ್ಚಿಮ ಭಾಗದಲ್ಲಿದೆ. ಈ ಹೆಸರು ದಿಕ್ಕನ್ನು ಸೂಚಿಸಲ್ಲ. ಇಲ್ಲಿ ಕನ್ನಡ ಇದೆಯಾ? ಎಂದು ಪ್ರಶ್ನಿಸಿದ ಅವರು ಇಲ್ಲ ಎಲ್ಲರೂ ಕನ್ನಡ ಮಾತಾಡಲ್ಲ. ಇಲ್ಲಿನ ಹೆಚ್ಚು ಜನರು ತುಳು ಮಾತಾಡುತ್ತಾರೆ. ಅಲ್ಲದೆ ಇಲ್ಲಿ ಮಲಯಾಳಂ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳು ವ್ಯಾಪಕವಾಗಿದೆ. ನಮ್ಮ ಸೊಗಡು, ನಂಬಿಕೆ, ಭಾವನೆ ಬೆಸೆಯುವ ಹೆಸರು ಸೂಚಿಸುತ್ತಿದ್ದೇವೆ. ನಾವು ಎಲ್ಲೇ ಹೋದರೂ ಆತ ಉಳ್ಳಾಲ, ಪುತ್ತೂರಿನವ ಆಗಿದ್ದರೂ ನಮ್ಮನ್ನು ನಾವು ಮಂಗಳೂರಿನವರು ಎಂದು ಗುರುತಿಸುತ್ತೇವೆ.
ಬೋಲ್ತೆರ್ ಇದ್ದದ್ದು ಬೆಳ್ತಂಗಡಿ ಆಯಿತು. ಬೆದ್ರ ಮೂಡಬಿದ್ರೆ ಆಯಿತು. ಬೆಂಗಳೂರು ಬ್ರಾಂಡ್ ಬೆಂಗಳೂರು ಆದ ಬಳಿಕ ಅದು ವಿಶ್ವವಿಖ್ಯಾಥ ಆಯಿತು. ಏರ್‌ಪೋರ್ಟ್, ಬಂದರ್, ಎಂಆರ್‌ಪಿಲ್, ಹೈವೇ, ಕನ್ನಡ ಪ್ರಥಮ ಪತ್ರಿಕೆ ಮಂಗಳೂರು ಸಮಚಾರ, ಮಂಗಳೂರು ಬನ್ಸ್, ಮಂಗಳೂರು ಮಲ್ಲಿಗೆ , ಮಂಗಳೂರು ಟೈಲ್ಸ್. ಹೀಗೆ ನಾವು ನಾವು ಮಂಗಳೂರಿನವರು ಎಂದು ಗುರುತಿಸಿಕೊಂಡಿದ್ದೇವೆ. ಅದಕ್ಕಾಗಿ ಜಿಲ್ಲೆಗೆ ಮಂಗೂರು ಅಂತ ಸೂಚಿಸುತ್ತೇವೆ. ನಮ್ಮ ಅಭಿಪ್ರಾಯ ಅಂತಿಮ ಅಲ್ಲ. ಜನರ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇವೆ ಎಂದರು.