ಚಂಡೀಗಡ: ಹರಿಯಾಣದ ಮಾಡೆಲ್ ಶೀತಲ್ ಕೆಲ ದಿನಗಳ ಕಾಲ ನಿಗೂಢವಾಗಿ ಕಣ್ಮರೆಯಾಗಿ ಕೊನೆಗೆ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಯ್‌ಫ್ರೆಂಡ್ ಸುನಿಲ್ ನನ್ನು ಸೋಮವಾರ ಸಂಜೆ ಇಸರಾನಾದಲ್ಲಿ ಅರೆಸ್ಟ್ ಮಾಡಲಾಗಿದೆ. ಶೀತಲ್‌ಳನ್ನು ಹಂತಕ ಸುನಿಲ್ ಕತ್ತಿಯಿಂದ ಇರಿದು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಂತಕ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆ ಎಂಬುದು ತಿಳಿದುಬಂದಿದೆ.
ಜೂನ್ 15 ರಂದು ಶೀತಲ್ ನಾಪತ್ತೆಯಾಗಿದ್ದ ಹಿನ್ನೆಲೆ, ಮಟ್ಲೌಡ ಪೊಲೀಸ್ ಠಾಣೆಯಲ್ಲಿ ಶೀತಲ್ ತಂಗಿ ಪ್ರಕರಣ ದಾಖಲಿಸಿದ್ದರು. ಬಳಿಕ ಸೋಮವಾರ ಬೆಳಗ್ಗೆ ಸೋನಿಪತ್‌ನಲ್ಲಿರುವ ಕಾಲುವೆಯಲ್ಲಿ ಶೀತಲ್ ಶವ ಪತ್ತೆಯಾಗಿತ್ತು. ಪತ್ತೆಯಾಗಿರುವ ಶೀತಲ್ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದ್ದವು.
ಹತ್ಯೆಯಾಗಿರುವ ಶೀತಲ್ ಪಾನಿಪತ್‌ನಲ್ಲಿ ತನ್ನ ಸಹೋದರಿಯೊಂದಿಗೆ ವಾಸವಾಗಿದ್ದು, ಹರಿಯಾಣದ ಸಂಗೀತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 14ರಂದು ಶೂಟಿಂಗ್‌ಗಾಗಿ ಅಹಾರ್ ಗ್ರಾಮಕ್ಕೆ ಹೋಗಿದ್ದ ಶೀತಲ್ ಮನೆಗೆ ಹಿಂದುರಿಗಿಲ್ಲ ಎಂದು ಶೀತಲ್ ತಂಗಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರ ಹುಡುಕಾಟದ ವೇಳೆ, ಸೋನಿಪತ್‌ನ ಖಾರ್ಖೋಡಾ ಬಳಿ ಇರುವ ಕಾಲುವೆಯಲ್ಲಿ ಈಕೆಯ ಶವ ಪತ್ತೆಯಾಗಿತ್ತು.
ಕುಟುಂಬದ ಮಾಹಿತಿಯ ಆಧಾರದಲ್ಲಿ ಸುನಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸೋಮವಾರ ಸಂಜೆ ಪಾರ್ಕ್ ಆಸ್ಪತ್ರೆಯ ಸಮೀಪದಲ್ಲಿ ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆರೋಪಿ ಶೀತಲ್‌ಳನ್ನು ಇರಿದು ಕೊಂದು, ಕಾರು ಅಪಘಾತದಂತೆ ತೋರಿಸಲು ಆಕೆಯ ಶವವನ್ನೂ ಕಾರನ್ನೂ ಕಾಲುವೆಗೆ ಎಸೆದಿರುವುದಾಗಿ ಆರೋಪಿ ಸುನಿಲ್ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.