“ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿ-ಜೆಡಿಎಸ್ ನಾಯಕರ ಕೆಲಸ”


ಬೆಂಗಳೂರು: “ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಮುಂದೆ ಮಾತಾಡಿದ ಅವರು, “ವಿಮಾನ ದುರಂತ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. 500 ಮೀಟರ್ ಮುಂದಕ್ಕೆ ಹೋಗಿ ವಿಮಾನ ಅಪ್ಪಳಿಸಿದ್ದರೆ ಸಾವಿರಾರು ಮಂದಿಯ ಜೀವಹಾನಿಯಾಗುತ್ತಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಕೆಲವರನ್ನು ಭೇಟಿ ಮಾಡಿ ಮಾತನಾಡಿದೆವು. ಈ ಅಪಘಾತ ಕುರಿತು ಬ್ಲಾಕ್ ಬಾಕ್ಸ್ ತನಿಖೆ ವರದಿ ಬರಬೇಕಾಗಿದೆ” ಎಂದರು.
“ನಾವು ಹಳೇ ಪ್ರಕರಣ ಹಾಗೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಟೀಕೆ ಮಾಡಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನಾನು ಅವುಗಳ ತಜ್ಞನಲ್ಲ. ಈ ಎಲ್ಲಾ ವಿಚಾರವಾಗಿ ಚರ್ಚೆ ಆಗುತ್ತಿದೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಇದು ದೇಶದ ಗಂಭೀರ ವಿಚಾರ” ಎಂದು ತಿಳಿಸಿದರು.

error: Content is protected !!