ಕಂಬುಲದ ಚಾಂಪಿಯನ್‌, ಶೇಕ್‌ ಹ್ಯಾಂಡ್‌ ಮಾಡುತ್ತಿದ್ದ ಚೀಂಕ್ರ ಇನ್ನಿಲ್ಲ

ಕಾರ್ಕಳ: ಕಂಬುಲದ ಚಾಂಪಿಯನ್‌, ಶೇಕ್ ಹ್ಯಾಂಡ್‌ ಮಾಡಿ ಸುದ್ದಿಯಾಗಿದ್ದ ಹಲವು ಮೆಡಲ್‌ ಗೆದ್ದಿದ್ದ ಚೀಂಕ್ರ ಕೇವಲ ಐದರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದು, ಕಂಬಲದ ಅಭಿಮಾನಿಗಳಿಗೆ ಭಾರೀ ಆಘಾತ ನೀಡಿದೆ.

ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರು ಪ್ರೀತಿಯಿಂದ ಸಾಕಿದ್ದ ಚೀಂಕ್ರ ಮೆದುಳು ಜ್ವರದಿಂದ ಮಂಗಳವಾರ ಮುಂಜಾನೆ ನಿಧನವಾಗಿದೆ. ʻಕೈ ಕೊರುʼ ಅಂದಾಗ ಶೇಖ್‌ ಹ್ಯಾಂಡ್‌ ಮಾಡಿ, ʻಮುಂಡು ಬೂರುʼ ಅಂದಾಗ ಅಡ್ಡಬೀಳುತ್ತಾ ಮನುಷ್ಯರ ಮಾತುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಭಾವನೆಗಳಿಗೆ ಸ್ಪಂದಿಸುತ್ತಿದ್ದ ಚೀಂಕ್ರ ಕಂಬಲ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ.

ಈ ಕೋಣವು ತನ್ನ ಮಾಲಕ ಕೌಶಿಕ್ ದಿನಕರ್ ಶೆಟ್ಟಿ ಅವರೊಂದಿಗೆ ‘ಶೇಕ್ ಹ್ಯಾಂಡ್’ ನೀಡುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಕಾರ್ಕಳದ ಮುಖೇಶ ಕೋಣದ ಜತೆಗೆ ಜೂನಿಯರ್ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಕಂಬಳ ಸೀಸನ್‌ನಲ್ಲೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಐದು ವರ್ಷದ ಪ್ರಾಯದಲ್ಲಿ ಜ್ವರದಿಂದ ಅಕಾಲಿಕ ಮರಣ ಹೊಂದಿದ ಈ ಕೋಣದ ನಿಧನವು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

error: Content is protected !!