ಹನಿಮೂನ್‌ಗೆ ಕರೆದುಕೊಂಡು ಹೋದ ಪತಿಯ ಹತ್ಯೆ, ಪತ್ನಿ ಅರೆಸ್ಟ್!

ಶಿಲ್ಲಾಂಗ್: ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ಇಂದೋರ್ ದಂಪತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿಯನ್ನು ಬಂಧಿಸಲಾಗಿದೆ.

ಪತಿ ರಾಜಾ ರಘುವಂಶಿ (30) ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಪತ್ನಿ ಸೋನಮ್ ರಘುವಂಶಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ

ಮೇ 23ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು. ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್‌ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು.

ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು ಎಂದು ಹೇಳಿದ್ದಾರೆ.

ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

error: Content is protected !!