ಉಳ್ಳಾಲ: ಮುಂಗಾರು ಪೂರ್ವ ರಾಕ್ಷಸ ಮಳೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇಡೀ ದಕ್ಷಿಣ ಕನ್ನಡ ಜಿಲ್ಲೆ ಜಲಪ್ರಳಯದತ್ತ ಸಾಗುತ್ತಿದೆ. ಈ ನಡುವೆ ಸಮುದ್ರತಟ ಉಳ್ಳಾಲದಲ್ಲಿ ಮಳೆ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಎರಡು ಮನೆಗಳ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಒಟ್ಟು ಆರು ಮಂದಿ ಮಣ್ಣಿನಡಿ ಸಮಾಧಿಯಾಗಿದ್ದು, ಬಾಲಕಿ ಹಾಗೂ ಮಹಿಳೆಯೋರ್ವರು ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಮೊಂಟೆಪದವು ಕೋಡಿಯಲ್ಲಿ ಒಬ್ಬರು ಮಹಿಳೆ ಮತ್ತು ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ದೇರಳಕಟ್ಟೆಯ ಕಾನಕೆರೆಯಲ್ಲಿ ಮನೆಗೆ ಗುಡ್ಡ ಕುಸಿದು ಫಾತಿಮಾ ನಯೀಮ ಎಂಬ 11 ವರ್ಷದ ಬಾಲಕಿ ಹಾಗೂ ಮೊಂಟೆ ಪದವು ಬಳಿ ಗುಡ್ಡ ಕುಸಿದು ಸಿಲುಕಿದವರ ಪೈಕಿ ಪ್ರೇಮ ಪೂಜಾರಿ (52) ಮೃತ ದುರ್ದೈವಿಗಳು.
ಕಾನಕರೆಯ ನೌಶಾದ್ ಅವರ ಮನೆಗೆ ಹಿಂಬದಿ ಗುಡ್ಡೆಯ ತಡೆಗೋಡೆ ಕುಸಿದು ಬಿದ್ದಿದ್ದು, ಮನೆಯ ಕೊಠಡಿಯ ಕಿಟಕಿ ಬಾಲಕಿ ನಯೀಮಾ ಮೇಲೆ ಬಿದ್ದಿದೆ. ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ಹಲವು ಗಂಟೆಗಳ ತೀವ್ರ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರ ಸ್ಥಿತಿಯಲ್ಲಿದ್ದ ಮಗು ಚಿಕಿತ್ಸೆ ಫಲಿಸದೆ ಮೃತ ಪಟ್ಟಿದೆ.
ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ ಮೃತಪಟ್ಟಿದ್ದಾರೆ. ಕಾಂತಪ್ಪ ಪೂಜಾರಿ ಅವರ ಕುಟುಂಬ ಮಲಗಿದ್ದ ಕೊಠಡಿಯ ಭಾಗಕ್ಕೆ ಗುಡ್ಡ ಜರಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕಾಂತಪ್ಪ ಪೂಜಾರಿ ಕಾಲು ಮುರಿದಿದ್ದು ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ, ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಆರುಷ್, ಆರ್ಯನ್ ಮಲಗಿದ್ದರು. ಸೀತಾರಾಮ ಅವರು ಮನೆಯಿಂದ ಹೊರಬರಲು ಯಶಸ್ವಿಯಾಗಿದ್ದಾರೆ. ಪ್ರೇಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹವೂ ಮಣ್ಣಿನಡಿಯಲ್ಲೇ ಇದೆ. ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ವಿನಿ ಮತ್ತು ಮಕ್ಕಳಾದ ಆರುಷ್, ಆರ್ಯನ್ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಧರೆ ಕುಸಿದ ಪರಿಣಾಮ ಮನೆ ಛಾವಣಿ ಬಿದ್ದಿದೆ. ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಭೇಟಿ ನೀಡಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.
ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರೋಡ್, ಕೋಟೆಕಾರ್, ಬೀರಿ, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿವೆ. ಕುಂಪಲ, ಪಿಲಾರು, ಕಲ್ಲಾಪು, ಧರ್ಮನಗರ, ತಲಪಾಡಿ, ಕಲ್ಕಟ್ಟ ಪ್ರದೇಶಗಳಲ್ಲು ಕೃತಕ ನೆರೆ ಬಂದಿದ್ದು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಕಲ್ಲಾಪುವಿನ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಲಪಾಡಿಯಲ್ಲಿ ಒಂದು ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಅಲ್ಲಿನ ಕುಟುಂಬವನ್ನು ರಾತ್ರಿ ವೇಳೆಯೇ ಸ್ಥಳಾಂತರ ಮಾಡಲಾಗಿದೆ.