ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಸ್ಮಾರಕ: ಜಮ್ಮು ಕಾಶ್ಮೀರ ಸಿಎಂ ಘೋಷಣೆ!

ನವದೆಹಲಿ : ಪಹಲ್ಗಾಮ್​ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಮಂದಿ ಅಮಾಯಕ ಪ್ರವಾಸಿಗರ ನೆನಪಿಗಾಗಿ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲುಗಳಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಂಗಳವಾರ ಘೋಷಿಸಿದ್ದಾರೆ .

“ನಾವು ಮೊದಲ ದಿನದಿಂದಲೇ ಇದರ ಬಗ್ಗೆ ಚರ್ಚಿಸುತ್ತಿದ್ದೇವೆ. 26 ಮುಗ್ಧ ಜೀವಗಳನ್ನು ಕಳೆದುಕೊಂಡವರಿಗೆ ಬೈಸರನ್‌ನಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗುವುದು, ಇದು ಶಾಶ್ವತ ಗೌರವ ಮತ್ತು ಅವರನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂಬ ಜ್ಞಾಪನೆಯಾಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.

ಮನೆಗೆ ಆಧಾರ ಸ್ತಂಭವಾದವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ . ತಮ್ಮ ಕಣ್ಮುಂದೆಯೇ ಮಹಿಳೆಯರು ತಮ್ಮ ತಂದೆ, ಪತಿ ಮತ್ತು ಮಕ್ಕಳನ್ನು ಕಳೆದುಕೊಂಡು ಕಣ್ಣೀರಾಕಿದ್ದರು. ಉಗ್ರರ ದಾಳಿಯಲ್ಲಿ ಪಾಣತೆತ್ತ 26 ಮುಗ್ಧ ಪ್ರವಾಸಿಗರಿಗೆ ಬೈಸರನ್‌ನಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗುವುದು. ಇದು ಅವರಿಗೆ ನಾವು ಸಲ್ಲಿಸುತ್ತಿರುವ ಶಾಶ್ವತ ಗೌರವ. ಭವ್ಯವಾಗಿರುವ ಸ್ಮಾರಕವನ್ನು ನಿರ್ಮಿಸುವ ಮೂಲಕ ಕುಸಿದು ಹೋಗಿರುವ ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಃ ಮೇಲೆತ್ತಲು ಪ್ರಯತ್ನಿಸುತ್ತೇವೆ. ಸದ್ಯ ಈ ಸ್ಮಾರಕದ ನಿರ್ಮಾಣ ಕೆಲಸಕ್ಕೆ ತಾತ್ವಿಕ ಅನುಮೋದನೆ ನೀಡಲು ಲೋಕೋಪಯೋಗಿ ಇಲಾಖೆಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

error: Content is protected !!