ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದ್ದು ಇಂದು ಒಟ್ಟು 1,009 ಸಕ್ರಿಯ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 752 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,000 ಗಡಿ ದಾಟಿದೆ. ಕೇರಳವು 430 ಸಕ್ರಿಯ ಪ್ರಕರಣಗಳೊಂದಿಗೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇತರ ರಾಜ್ಯಗಳಾದ ಮಹಾರಾಷ್ಟ್ರ (209), ದೆಹಲಿ (104), ಗುಜರಾತ್ (83) ಮತ್ತು ಕರ್ನಾಟಕ (47) ದಲ್ಲೂ ಕೂಡ ಪ್ರಕರಣಗಳು ವರದಿ ಮಾಡಿವೆ.
ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಯುವಕನೊಬ್ಬ ಕೋವಿಡ್-19ನಿಂದ ಮೃತಪಟ್ಟಿದ್ದಾನೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ. ಈ ಯುವಕನನ್ನು ಮೇ 22ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಕೋವಿಡ್-19 ಪ್ರಕರಣಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದ ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಕೋವಿಡ್-19 ಒಂದು ಸಾಮಾನ್ಯ ವೈರಲ್ ಸೋಂಕಿನಂತೆ ಪರಿಗಣಿಸಲಾಗಿದ್ದರೂ ಸಾರ್ವಜನಿಕರಿಗೆ ಕೈ ಸ್ವಚ್ಛತೆ ಕಾಪಾಡಿಕೊಳ್ಳುವುದು, ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಸಭೆ-ಸಮಾರಂಭಗಳನ್ನು ತಪ್ಪಿಸುವುದು ಸೇರಿದಂತೆ ಮೂಲಭೂತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.