ಟ್ರಾಫಿಕ್ ಪೋಲೀಸರ ಅಮಾನವೀಯ ವರ್ತನೆಗೆ ಮಗು ದಾರುಣ ಬಲಿ! ಮಂಡ್ಯದಲ್ಲಿ ಮನ ಕಲಕುವ ಘಟನೆ!!

ಮಂಡ್ಯ: ನಾಯಿ ಕಚ್ಚಿದೆ ಎಂದು ತುರ್ತು ಚಿಕಿತ್ಸೆಗಾಗಿ ಮೂರುವರೆ ವರ್ಷ ಪ್ರಾಯದ ಮಗುವನ್ನು ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಎಂದು ಏಕಾಏಕಿ ಅಡ್ಡಗಟ್ಟಿದ ಪರಿಣಾಮ ಬೈಕ್ ಮಗುಚಿಬಿದ್ದು ರಸ್ತೆಗೆಸೆಯಲ್ಪಟ್ಟ ಮಗುವಿನ ಮೇಲೆ ಟೆಂಪೋ ಹಾದುಹೋಗಿ ಹೆತ್ತವರ ಮಡಿಲಲ್ಲೇ ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ವರದಿಯಾಗಿದೆ.
ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಗೊರವನಹಳ್ಳಿ ನಿವಾಸಿಗಳಾದ ಅಶೋಕ್, ವಾಣಿ ದಂಪತಿಯ ಪುತ್ರಿ ಹೃತೀಕ್ಷಾ ಸ್ಥಳದಲ್ಲೇ ಮೃತಪಟ್ಟ ಮಗು. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ ಬೈಕ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಲ್ಮೆಟ್ ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಹೀಗಾಗಿ ಮಗು ಸೇರಿದಂತೆ ದಂಪತಿ ಆಯ ತಪ್ಪಿ ಬಿದಿದ್ದಾರೆ. ಈ ವೇಳೆ ಅಪಘಾತ ನಡೆದು ಮಗು ಸಾವನ್ನಪ್ಪಿದ್ದಾಳೆ.
ಕಣ್ಣೆದುರೇ ಸಾವನ್ನಪ್ಪಿದ ಮಗುವನ್ನು ಮಡಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಪೋಷಕರು ಗೋಳಾಡುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

error: Content is protected !!