ಮಂಗಳೂರು: ಮುಂಗಾರುಪೂರ್ವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು -ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರಸ್ತೆ ಅಲ್ಲಲ್ಲಿ ಮಣ್ಣು ಕುಸಿಯುತ್ತಿದೆ. ಕಳೆದ ವರ್ಷವೂ ಇಲ್ಲಿ ಕುಸಿತ ಉಂಟಾಗಿ ಅಪಾರ ಹಾನಿ ಉಂಟಾಗಿತ್ತು. ಆದರೆ ಈ ಬಾರಿಯೂ ಕುಸಿತ ಮುಂದುವರಿದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಕಲೇಶಪುರ ತಾಲೂಕಿನ ದೋಣಿಗಾಲ್ ಮತ್ತು ಅಡ್ಡನಗುಡ್ಡದ ಬಳಿ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ತಡೆಗೋಡೆ ನಿರ್ಮಿಸಿದ್ದರೂ ಕೂಡ ರಸ್ತೆ ಮೇಲೆ ಮಣ್ಣು ಕುಸಿದಿದ್ದು, ಮಣ್ಣಿನ ಸಮೇತ ಮರಗಳು ನೆಲಕ್ಕೆ ಉರುಳುತ್ತಿವೆ.
ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.