ಇಸ್ಲಾಮಾಬಾದ್: ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಸಹ-ಸಂಸ್ಥಾಪಕ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಆಪ್ತ ಅಮೀರ್ ಹಮ್ಜಾ ಎಂಬಾತನಿಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಕ್ಕೆ ಹೊಕ್ಕು ಗುಂಡಿನ ದಾಳಿ ನಡೆಸಿದ್ದು ಆತ ಗಂಭೀರ ಗಾಯಗೊಂಡಿದ್ದಾನೆ. 66 ವರ್ಷದ ಹಮ್ಜಾಗೆ ಗಂಭೀರ ಗಾಯವಾಗಿದ್ದು, ಈಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭದ್ರತೆಯಲ್ಲಿ ಲಾಹೋರ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಗೆ ದಾಖಲಾದ ನಂತರ ಹಮ್ಜಾಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಳಿ ಉಡುಪಿನ ಮೇಲೆ ರಕ್ತದ ಕಲೆಗಳು ಕಂಡುಬಂದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ಮೂಲದ ಹಮ್ಜಾನನ್ನು ಆಗಸ್ಟ್ 2012 ರಲ್ಲಿ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು.