ಮಂಗಳೂರು: ಪಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿದ್ದ ರಿಷಬ್ ಶೆಟ್ಟಿ ಅಭಿನಯದ ʻಕಾಂತಾರʼ ಸಿನಿಮಾ ಹಿಟ್ ಆಗಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದ ಆರಂಭದಲ್ಲಿಯೇ ಹಲವಾರು ಗಂಡಾಂತರಗಳನ್ನು ಎದುರಿಸಿಕೊಂಡು ಬರುತ್ತಿತ್ತು. ಇದೀಗ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲಾವಿದ ಕಾಮಿಡಿ ಕಿಲಾಡಿ ಖ್ಯಾತಿಯ ಮಲ್ಪೆಯ ಹೂಡೆಯ ರಾಕೇಶ್ ಪೂಜಾರಿ(33) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಕೆಲವು ದಿನಗಳ ಹಿಂದೆ ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವ ರಿಷಬ್ ಶೆಟ್ಟರಿಗೆ ʻನಿನಗೆ ಶತ್ರುಗಳು ಕೇಡು ಬಗೆದಿದ್ದಾರೆʼ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಪಂಜುರ್ಲಿಯ ಮಾತಿನಂತೆ ಚಿತ್ರಕ್ಕೆ ಒಂದೊಂದು ವಿಘ್ನಗಳು ಕಾಡುತ್ತಿರುವುದು ಕಾಂತಾರ ಕಲಾವಿದರು ಬೆಚ್ಚಿಬಿದ್ದಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕಂಕಟದ ಸರಮಾಲೆ
ಕಾಂತಾರ ಪ್ರೀಕ್ವೆಲ್ ಕಾಂತಾರ ಚಾಪ್ಟರ್ -1 ಚಿತ್ರೀಕರಣದ ವೇಳೆ ಸಕಲೇಶಪುರ ಅರಣ್ಯದಲ್ಲಿ ಅಕ್ರಮವಾಗಿ ಶೂಟಿಂಗ್ ಸೆಟ್ ವಸ್ತುಗಳನ್ನು ಸುರಿದಿದ್ದಕ್ಕಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ರೂ. 50,000 ದಂಡ ವಿಧಿಸಿದ್ದರು. ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸ್ಫೋಟಿಸಿ, ಮರಗಳನ್ನು ಕಡಿದಿರುವ ಆರೋಪವನ್ನು ಚಿತ್ರ ತಂಡದ ಮೇಲೆ ಹೊರಿಸಲಾಗಿತ್ತು.
ಮೇ 6ರಂದು ಕಾಂತಾರ ಚಿತ್ರ ತಂಡದ ಕಲಾವಿದ ಕೇರಳದ ಕೊಟ್ಟಾಯಂ ನಿವಾಸಿ ಕಪಿಲ್ (32) ಎಂಬವರು ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ಹೋದವರು ನೀರುಪಾಲಾಗಿದ್ದರು.
ಇದೀಗ ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ಉಡುಪಿ ಮೂಲದ ಪ್ರತಿಭಾವಂತ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅಭಿನಯಿಸುತ್ತಿದ್ದರು. ಆದರೆ ಮೇ 12 ರಂದು ಬೆಳಿಗ್ಗೆ ಅಚಾನಕ್ ಆಗಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಮೇ 11 ರ ಮಧ್ಯರಾತ್ರಿ ಮಿಯ್ಯಾರಿನಲ್ಲಿ ಸ್ನೇಹಿತರ ಮದುವೆಯ ಅರತಕ್ಷತೆಯಲ್ಲಿ ರಾಕೇಶ್ ಪೂಜಾರಿ ಭಾಗವಹಿಸಿ ಸುಸ್ತಾಗಿದ್ದು, ಕೂಡಲೆ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ರಾಕೇಶ್ ಪೂಜಾರಿ ಕೊನೆಯುಸಿರೆಳೆದಿದ್ದಾರೆ. ಅದ್ಭುತ ಪ್ರತಿಭಾವಂತ ಹುಡುಗನಾಗಿದ್ದ ರಾಕೇಶ್‌ಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು. ಮೇ 11ರಂದು ಸಿನಿಮಾದ ಚಿತ್ರೀಕರಣದಲ್ಲಿ ಇವರು ಭಾಗವಹಿಸಿ ಸ್ನೇಹಿತನ ಮದುವೆಗೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿತ್ತು. ಮೇ 11 ರಂದು ಬೆಳಗ್ಗೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ರಾಕೇಶ್ ಪೂಜಾರಿ ರಾತ್ರಿ ಸಾವನ್ನಪ್ಪಿರೋದು, ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಅವರು ಹೊಸ ಮನೆ ಕಟ್ಟಿದ್ದರು.
ಎಚ್ಚರಿಕೆ ನೀಡಿದ್ದ ಪಂಜುರ್ಲಿ:
ಕಾಂತಾರ ಚಿತ್ರೀಕರಣಕ್ಕೆ ಒಂದೊಂದೇ ವಿಘ್ನಗಳು ಎದುರಾಗುತ್ತಿರುವುದರನ್ನು ಮನಗಂಡು ಇತ್ತೀಚೆಗೆ ರಿಷಬ್ ಶೆಟ್ಟರು ಮಂಗಳೂರಿನ ಕದ್ರಿ ಬಾರೆಬೈಲಿನಲ್ಲಿ ನಡುರಾತ್ರಿ ನಡೆದಿದ್ದ ವಾರಾಹಿ ಪಂಜುರ್ಲಿ ನೇಮಕ್ಕೆ ಇಬ್ಬರು ಮಕ್ಕಳೊಂದಿಗೆ ಪತ್ನಿ ಸಮೇತ ಪಾಲ್ಗೊಂಡಿದ್ದರು.
ಅಲ್ಲಿ ಬೆಳಗ್ಗಿನವರೆಗೆ ಕೂತು ವಾರಾಹಿ ಪಂಜುರ್ಲಿ, ಜಾರಂದಾಯ ದೈವಗಳ ನೇಮ ವೀಕ್ಷಿಸಿ ಪ್ರಧಾನ ದೈವ ವಾರಾಹಿ ಪಂಜುರ್ಲಿಯ ಮುಂದೆ ನೋವು ತೋಡಿಕೊಂಡಿದ್ದರು.
ಆಗ ದೈವ ನಟನನ್ನು ಸಂತೈಸಿ, ʻಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಭಾರೀ ಸಂಚು ನಡೆದಿದೆ. ಈಗ ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನೀನು ನಂಬಿದ ದೈವ ಕೈಬಿಡುವುದಿಲ್ಲʼ ಎಂದು ದೈವ ಆಶ್ವಾಸನೆ ನೀಡಿತ್ತು.
‘ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ಆದರೆ ಕೇಡು ಆಗದಂತೆ ನೋಡಿಕೊಳ್ತೇನೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆʼ ಎಂದು ಅಭಯ ನೀಡಿತ್ತು. ದೈವ ಅಭಯ ನೀಡಿದ ಕೆಲವೇ ದಿನಗಳಲ್ಲಿ ಚಿತ್ರ ತಂಡದ ಕಲಾವಿದರು ಅಕಾಲಿಕ ಮರಣವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಚಿತ್ರ ತಂಡ ಪಂಜುರ್ಲಿಯ ಎಚ್ಚರಿಕೆಯನ್ನು ನಿರ್ಲಕ್ಷಿಸಿತೋ ಅಥವಾ ಚಿತ್ರ ಯಶಸ್ವಿಯಾಗದಂತೆ ಮಾಡುವ ಹಿತ ಶತ್ರುಗಳ ತೊಂದರೆಯನ್ನು ನಿವಾರಿಸಲು ಚಿತ್ರ ತಂಡ ದೈ ನುಡಿದಂತೆ ಮಾಡಲಿಲ್ಲವಾ ಎಂದೆಲ್ಲಾ ಪ್ರಶ್ನೆಗಳು ಕೇಳಿಬರಲಾರಂಭಿಸಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಾಮಾನಗಳಿಂದ ಚಿತ್ರ ಕಲಾವಿದರಿಗೆ ಮಾತ್ರವಲ್ಲದೆ ಚಿತ್ರಾಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ.