ʻತುಂಬಾ ಜನರಿಗೆ ಇದು ಗೊತ್ತಿಲ್ಲ. ಅದೇನು ಅಜ್ಞಾನವೋ ಅಥವಾ ಮಾಹಿತಿ ಕೊರತೆಯೋ ಗೊತ್ತಿಲ್ಲ. ಮೂತ್ರ ಕುಡಿಯುವುದು ಯೋಗದಲ್ಲಿ ಒಂದು ಅಭ್ಯಾಸ. ನಾನು ಅದನ್ನು ಸ್ವತಃ ಅಭ್ಯಾಸ ಮಾಡಿದ್ದೇನೆ. ನಾನು ಸ್ವತಃ ನನ್ನದೇ ಮೂತ್ರ ಕುಡಿದಿದ್ದೇನೆ. ಮೂತ್ರ ನನ್ನ ಸೌಂದರ್ಯದ ಹಾಗೂ ಆರೋಗ್ಯದ ಗುಟ್ಟು, ನೀವೂ ನಿಮ್ಮದೇ ಮೂತ್ರ ಕುಡಿದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ’ ಎಂದು ಖ್ಯಾತ ನಟಿ ಅನು ಅಗರ್ವಾಲ್ ಹೇಳಿದ್ದಾರೆ.
ಮೂತ್ರ ಕುಡಿದರೆ ಸಾಕಷ್ಟು ಉಪಯೋಗ ಇದೆ. ಇದು ತಮ್ಮ ಸ್ವಂತ ಅನುಭವಕ್ಕೆ ಬಂದಿದೆ ಎಂದು ಎಂದು ನಟಿ ಅನು ಅಗರ್ವಾಲ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಕೆಲವೇ ದಿನಗಳ ಹಿಂದೆ ನಟ ಪರೇಶ್ ರಾವಲ್ ಅವರು ನೀಡಿದ ಒಂದು ಹೇಳಿಕೆ ಸಖತ್ ಸುದ್ದಿ ಆಗಿತ್ತು. ಮೊಣಕಾಲಿನ ನೋವು ನಿವಾರಣೆಗೆ ಪರೇಶ್ ರಾವಲ್ ಅವರು ತಮ್ಮದೇ ಮೂತ್ರ ಕುಡಿದಿದ್ದಾಗಿ ತಿಳಿಸಿದ್ದರು. ಈಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಹಿರಿಯ ನಟಿ ಅನು ಅಗರ್ವಾಲ್, ‘ನಾನು ಕೂಡ ಮೂತ್ರ ಕುಡಿದಿದ್ದೇನೆ’ ಎಂದು ಬಣ್ಣಿಸಿ ಮೂತ್ರವನ್ನು ಅಮೃತ, ಔಷಧಿಗೆ ಹೋಲಿಸಿದ್ದಾರೆ. ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
‘ಒಂದು ನೆನಪಿಡಬೇಕಾದ ಮುಖ್ಯವಾದ ವಿಷಯ ಏನೆಂದರೆ, ಪೂರ್ತಿ ಮೂತ್ರವನ್ನು ಕುಡಿಯಬೇಕಿಲ್ಲ. ಅದರಲ್ಲಿನ ನಿರ್ದಿಷ್ಟ ಭಾಗವನ್ನು ಕುಡಿಯಬೇಕು. ಆ ಭಾಗವನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ. ವಯಸ್ಸಾಗದಂತೆ ಅದು ತಡೆಯುತ್ತದೆ. ಚರ್ಮ ಸುಕ್ಕಾಗುವುದಿಲ್ಲ. ಅದು ನಿಜಕ್ಕೂ ಅದ್ಭುತ. ಕೇವಲ ಆರೋಗ್ಯಕ್ಕಾಗಿ ಅಲ್ಲ, ಉತ್ತಮವಾದ ಜೀವನಕ್ಕೂ ಅದು ಅನುಕೂಲಕರ. ನಾನು ವೈಯಕ್ತಿಯವಾಗಿ ಅದರ ಅನುಭವ ಪಡೆದಿದ್ದೇನೆ’ ಎಂದಿದ್ದಾರೆ ಅನು ಅಗರ್ವಾಲ್.
ಇಂಥ ವಿಷಯ ಹೇಳಿದ್ದಕ್ಕೆ ವೈಜ್ಞಾನಿಕ ಪುರಾವೆ ಇದೆಯಾ ಎಂದು ಅನು ಅಗರ್ವಾಲ್ ಅವರಿಗೆ ಕೇಳಲಾಗಿದೆ. ಅದಕ್ಕೆ ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ‘ವಿಜ್ಞಾನ ಎಷ್ಟು ಹಳೆಯದು? 200 ವರ್ಷ ಇರಬಹುದಾ? ಆದರೆ ಯೋಗ 10 ಸಾವಿರ ವರ್ಷಗಳಿಂದ ಇದೆ. ಹಾಗಾಗಿ ನೀವು ಯಾರ ಮಾತು ಕೇಳುತ್ತೀರಿ? ನಾನು ಇದನ್ನು ಬೆಂಬಲಿಸುತ್ತೇನೆ’ ಎಂದು ಅನು ಅಗರ್ವಾಲ್ ಅವರು ಹೇಳಿದ್ದಾರೆ.
‘ಆಶಿಕಿ’, ‘ಖಳ ನಾಯಿಕಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ.