ನವದೆಹಲಿ: ಕಳೆದ ತಿಂಗಳು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರೂ ಭಯೋತ್ಪಾದನೆಯ ವಿರುದ್ಧ ಹೋರಾಡಲು ಒಗ್ಗೂಡಿರುವ ಸಮಯದಲ್ಲಿ ಇಂತಹ ಅರ್ಜಿಗಳು ಭದ್ರತಾ ಪಡೆಗಳ ಮನೋಬಲವನ್ನು ಕುಗ್ಗಿಸಬಹುದು ಎಂದು ಭಾರತದ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ, “ಈ ದೇಶದ ಪ್ರತಿಯೊಬ್ಬ ನಾಗರಿಕರೂ ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸಿದ ನಿರ್ಣಾಯಕ ಸಮಯವಾಗಿದೆ ಇದು” ಎಂದು ಹೇಳಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಅರ್ಜಿದಾರರಾದ ಹತೇಶ್ ಕುಮಾರ್ ಸಾಹು ಅವರಿಗೆ, ಒಬ್ಬ ಭಾರತದ ಪ್ರಜೆಯಾಗಿ ರಾಷ್ಟ್ರದ ಬಗ್ಗೆ ಇರುವ ಜವಾಬ್ದಾರಿಯನ್ನು ನೆನಪಿಸಿತು ಮತ್ತು ನಿವೃತ್ತ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ದಾಳಿಯ ತನಿಖೆ ನಡೆಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸುವ ಮೂಲಕ “ಬೇಜವಾಬ್ದಾರಿಯಿಂದ” ವರ್ತಿಸಿದ್ದಕ್ಕಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿತು.
ವಕೀಲರಾದ ಸಾಹು, ಪಡೆಗಳ ಮನೋಬಲವನ್ನು ಕುಗ್ಗಿಸುವುದು ತನ್ನ ಉದ್ದೇಶವಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು ಮತ್ತು ಅವರು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಡೆದ ಹತ್ಯೆಗಳ ತನಿಖೆಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಉಗ್ರರ ದಾಳಿ ಕುರಿತು ತನಿಖೆಗೆ ನ್ಯಾಯಾಂಗ ಸಮಿತಿ ರಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ವತಂತ್ರ, ಪಾರದರ್ಶಕ ತನಿಖೆಯ ಅಗತ್ಯವಿದೆ ಎಂದು ಜಮ್ಮು-ಕಾಶ್ಮೀರದ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಫತೇಶ್ ಕುಮಾರ್ ಶಾಹು, ಮೊಹಮ್ಮದ್ ಜುನೈದ್, ವಿಕ್ಕಿ ಕುಮಾರ್ ಅರ್ಜಿ ಸಲ್ಲಿಸಿದ್ದರು.
ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದಾಗ ಕನಿಷ್ಠ 26 ಜನರು ಸಾವನ್ನಪ್ಪಿದರು ಮತ್ತು ಸುಮಾರು 15 ಜನರು ಗಾಯಗೊಂಡರು. ‘ಮಿನಿ ಸ್ವಿಟ್ಜರ್ಲೆಂಡ್’ ಎಂದೂ ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ಪ್ರವೇಶಿಸಬಹುದಾಗಿದೆ.