ನವದೆಹಲಿ: ಮಹಲ್ಗಾಂ ದಾಳಿಗೆ ಭಾರತ ಪ್ರತೀಕಾರ ತೀರಿಸಬಹುದೆನ್ನುವ ಭೀತಿಯಿಂದ ಸಂಭಾವ್ಯ ದಾಳಿಯನ್ನೆದುರಿಸಲು ಪಾಕಿಸ್ತಾನ ವಾಯುಸೇನೆ ತನ್ನ ಪ್ರಮುಖ ವಿಮಾನಗಳನ್ನು ಭಾರತದ (India) ಗಡಿಯ ನೆಲೆಗಳಿಗೆ ಸಾಗಿಸುತ್ತಿರುವ ವಿಚಾರ ಫ್ಲೈಟ್‌ರಾಡರ್‌ನಲ್ಲಿ ಗೊತ್ತಾಗಿದೆ.
ತನ್ನ ಮೇಲೆ ಭಾರತ ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದಂತೆ ಈ ಬಾರಿಯೂ ದಾಳಿ ನಡೆಸಬಹುದು ಎನ್ನುವ ಭಯದಲ್ಲಿರುವ ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಪ್ರಮುಖ ವಿಮಾನಗಳು ಕರಾಚಿಯ ದಕ್ಷಿಣ ವಾಯು ಕಮಾಂಡ್‌ನಿಂದ ಉತ್ತರದ ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ನೆಲೆಗಳಿಗೆ ಸಂಚರಿಸುತ್ತಿರುವ ಫ್ಲೈಟ್‌ರಾಡರ್ 24 ರ ಸ್ಕ್ರೀನ್‌ಶಾಟ್‌ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಲಾಹೋರ್ ಮತ್ತು ರಾವಲ್ಪಿಂಡಿ ಬಳಿಯ ವಾಯುನೆಲೆಗಳು ಭಾರತೀಯ ಗಡಿಗಳಿಗೆ ಹತ್ತಿರದಲ್ಲಿವೆ. PAF198 ಲಾಕ್‌ಹೀಡ್ C-130E ಹರ್ಕ್ಯುಲಸ್ ಸಾರಿಗೆ ವಿಮಾನವಾಗಿದ್ದರೆ PAF101 ಸಣ್ಣ ಎಂಬ್ರೇರ್ ಫೆನಮ್ 100 ಜೆಟ್ ಅನ್ನು ಸಾಮಾನ್ಯವಾಗಿ ವಿಐಪಿ ಸಾರಿಗೆ ಅಥವಾ ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.
2019ರ ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಹುತಿ ಉಗ್ರನ ದಾಳಿ 40 ಸೈನಿಕರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತು. ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಫೆಬ್ರವರಿ 26 ರಂದು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿತ್ತು.