ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ 26 ಮಂದಿ ಅಮಾಯಕರ ರಕ್ತ ಬಸಿದ ಮೂವರು ಶಂಕಿತ ಉಗ್ರರ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಈ ರೇಖಾಚಿತ್ರದ ಪ್ರಕಾರ ಎಐ ಚಿತ್ರಗಳನ್ನು ರಚಿಸಿ ಭಯೋತ್ಪಾದಕರ ಗುರುತು ಪತ್ತೆಕಾರ್ಯಕ್ಕೆ ಸೇನೆ ಮುಂದಾಗಿದೆ.
ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ. ಭದ್ರತಾ ಪಡೆಗಳು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಮತ್ತು ಅರಣ್ಯ ಪ್ರದೇಶವನ್ನು ಬಳಸಿಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿವೆ.
ಪ್ರಾಥಮಿಕ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಬದುಕುಳಿದವರ ಸಾಕ್ಷ್ಯಗಳ ಪ್ರಕಾರ, ಭಯೋತ್ಪಾದಕರು ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸಂವಹನ ಸಾಧನಗಳನ್ನು ಬಳಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ಆಗಿದ್ದು, ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್‌ಎಫ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ನೇತೃತ್ವ ವಹಿಸಿಕೊಂಡಿದ್ದಾರೆ.
ಸೈಫುಲ್ಲಾ ಖಾಲಿದ್ನನ್ನು ಸೈಫುಲ್ಲಾ ಕಸೂರಿ ಎಂದೂ ಕರೆಯುತ್ತಾರೆ. ಆತ ಲಷ್ಕರ್ ಎ ತೊಯ್ಬಾ ಉಪ ಮುಖ್ಯಸ್ಥನಾಗಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್ಗೆ ಆಪ್ತ ಎಂದು ಪರಿಗಣಿಸಲಾಗಿದೆ. ಸೈಫುಲ್ಲಾಗೆ ಐಷಾರಾಮಿ ಕಾರುಗಳೆಂದರೆ ಇಷ್ಟ, ಆತನಿಗೆ ಭಾರತದ ಪ್ರಧಾನಿಗಿಂತ ಹೆಚ್ಚಿನ ಭದ್ರತೆ ಇದೆಯಂತೆ.
ಸೈಫುಲ್ಲಾ ಖಾಲಿದ್ ಪಾಕಿಸ್ತಾನದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾನೆಂದರೆ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಆತನ ಮೇಲೆ ಹೂಮಳೆ ಸುರಿಸಿ ಬರಮಾಡಿಕೊಳ್ಳುತ್ತಾರೆ. ಆತ ಪಾಕಿಸ್ತಾನದಲ್ಲಿ ವಿಐಪಿಯಂತೆ ಓಡಾಡುತ್ತಾನೆ. ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಪಂಜಾಬ್ನ ಕಂಗನ್ಪುರ ಪ್ರದೇಶಕ್ಕೆ ಬಂದಿದ್ದ, ಅಲ್ಲಿ ಒಂದು ಪಾಕಿಸ್ತಾನಿ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಎಂಬಾತ ಕಾರ್ಯಕ್ರಮ ಆಯೋಜಿಸಿದ್ದನು ಎಂದು ಹೇಳಲಾಗಿದೆ.
ಕೊಲ್ಲಲ್ಪಟ್ಟವರಲ್ಲಿ ಇಬ್ಬರು ವಿದೇಶಿಯರು (ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳದವರು) ಮತ್ತು ಇಬ್ಬರು ಸ್ಥಳೀಯ ನಿವಾಸಿಗಳು ಸೇರಿದ್ದಾರೆ. 26 ಜನರಲ್ಲಿ 22 ಜನರನ್ನು ಗುರುತಿಸಲಾಗಿದ್ದು, ಉಳಿದವರನ್ನು ಗುರುತಿಸಲಾಗುತ್ತಿದೆ.