ಭಗ್ನವಾಯಿತಾ ಜನರ ಸ್ವೀಟ್‌ ‌ʻಡ್ರೀಮ್?ʼ: ಸಾವಿರಾರು ಗ್ರಾಹಕರು ಕಂಗಾಲು

ಮಂಗಳೂರು: ಲಕ್ಕಿ ಸ್ಕೀಮ್‌ಗಳ ಮೂಲಕ ಜನರಿಗೆ ಫ್ಲ್ಯಾಟ್‌, ಕಾರು, ಚಿನ್ನದ ಚೈನ್‌, ಮುಂತಾದ ಬಹುಮಾನಗಳ ಆಸೆ ಹುಟ್ಟಿಸಿ ಪ್ರತೀ ತಿಂಗಳು ಹಣದ ಕಂತು ಸ್ವೀಕರಿಸುವ ಸಂಸ್ಥೆಯೊಂದು ಮುಳುಗುವ ಹಂತಕ್ಕೆ ತಲುಪಿದೆ ಎಂಬ ಮಾಹಿತಿ ಲಭಿಸಿದ್ದು, ಸಾವಿರಾರು ಮಂದಿ ಗ್ರಾಹಕರು ಕಂಗಾಲಾಗಿದೆ. ಗ್ರಾಹಕರಿಗೆ ಸದಾ ಸ್ವೀಟ್‌ ʻಡ್ರೀಂʼ ನೀಡಿ ಐಷಾರಾಮಿ ಬಹುಮಾನಗಳ ಆಸೆ ಹುಟ್ಟಿಸಿದ್ದ ಸಂಸ್ಥೆಯ ಬರೋಬ್ಬರಿ 9 ಮಂದಿ ಪಾರ್ಟ್ನರ್‌ಗಳು ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಕಂಪೆನಿ ಬಹುತೇಕ ಮುಳುಗಡೆಯಾಗಿದ್ದು, ಅದರ ಸಿಎಓಗಳು ಇಲ್ಲಿಂದ ಎಸ್ಕೇಪ್‌ ಆಗಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ (AI Photo)

ಪ್ರತೀ ತಿಂಗಳು ರೂ. 1000 ಕಂತು ನೀಡಿದ್ರೆ ಪ್ರತೀ ತಿಂಗಳು ಜನರ ಮುಂದೆಯೇ ಲಕ್ಕಿ ಡ್ರಾ ನಡೆಸಲಾಗುತ್ತದೆ. ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಪ್ಲ್ಯಾಟ್‌, ಕಾರು, ಚಿನ್ನದ ಸರ, ಟಿವಿ, ಫ್ರಿಡ್ಜ್‌ ಮುಂತಾದ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಬಹುಮಾನ ವಿಜೇತರಾದವರು ಮತ್ತೆ ಕಂತು ಕಟ್ಟಬೇಕಿಲ್ಲ.

ಸಾಂದರ್ಭಿಕ ಚಿತ್ರ(AI Photo)

ಅಲ್ಲದೆ ಲಕ್ಕಿ ಡ್ರಾದಲ್ಲಿ ಬಹುಮಾನ ಸಿಗದಿದ್ದವರು ಕಂತು ಮುಗಿದಾಗ ಅವರು ಪಾವತಿಸಿ ಹಣದ ಮೊತ್ತಕ್ಕಿಂತ ಹೆಚ್ಚಿನ ಮೌಲ್ಯದ ಬಹುಮಾನ ಕೊಡುವುದಾಗಿ ಈ ಸ್ಕೀಂನಲ್ಲಿ ಹೇಳಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾವಿರಾರು ಮಂದಿ ಇದಕ್ಕೆ ಮುಗಿಬಿದ್ದು ಸೇರಿದ್ದಾರೆ. ಅಲ್ಲದೆ ಇದೇ ರೀತಿ ಸ್ವೀಟ್‌ ಡ್ರೀಂ ನೀಡುವ ಡೀಲಿಂಗ್‌ ಕಂಪೆನಿಗಳು ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ನೆಟ್‌ವರ್ಕ್‌ ಮಾರ್ಕೆಟಿನಂತೆ ಜನರನ್ನು ಬೋಳಿಸುವ ಬ್ಲೇಡ್‌ ಕಂಪೆನಿಗಳಿಂದ ಜನರು ಆಗಾಗ ಮೋಸ ಹೋಗುತ್ತಲೇ ಬರುತ್ತಿದ್ದಾರೆ. ಆದರೂ ಜನರು ಸೇರುವುದನ್ನು ಬಿಡುವುದಿಲ್ಲ.

ಮೂಲಗಳ ಪ್ರಕಾರ ಮಂಗಳೂರಿನ ಈ ಡೀಲಿಂಗ್‌ ಕಂಪೆನಿ ಗ್ರಾಹಕರ ಸ್ವೀಟ್‌ ಡ್ರೀಂಗೆ ತಣ್ಣೀರು ಎರಚಿದ್ದು, ಮುಳುಗವ ಹಂತಕ್ಕೆ ತಲುಪಿದೆ. ಈಗಾಗಲೇ ಸಾವಿರಾರು ಮಂದಿ ಗ್ರಾಹಕರು ಸಾವಿರಾರು ರೂಪಾಯಿ ಹಣವನ್ನು ಕಟ್ಟಿದ್ದು, ಅವರೀಗ ಬಹುಮಾನದ ಆಸೆಯನ್ನೇ ಬಿಡುವ ಪರಿಸ್ಥಿತಿ ಎದುರಾಗಿದೆ. ಸಂಸ್ಥೆಯ ಪ್ರಮುಖ ವ್ಯಕ್ತಿಯೋರ್ವ ಗ್ರಾಹಕರ ದುಡ್ಡನ್ನು ಗುಳುಂ ಮಾಡಿದ್ದು, ಇಲ್ಲಿಂದ ಎಸ್ಕೇಪ್‌ ಆಗಲು ತಯಾರಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಇಂಥದ್ದೇ ಲಕ್ಕಿ ಡ್ರಾ ಸ್ಕೀಂನಲ್ಲಿ ಮೊದಲೇ ಸಿದ್ಧಪಡಿಸಿದ್ದ ಅದೃಷ್ಟ ಚೀಟಿಯನ್ನು ತೆಗೆದು ವಂಚನೆ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಆಗ ಸಂಸ್ಥೆಯ ಪ್ರಮುಖರು ಹೀಗೆ ಗೋಲ್‌ಮಾಲ್‌ ಮಾಡಿದ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದಾಗಿ ಸಮಜಾಯಿಷಿ ನೀಡಿದ್ದರು. ಆದರೆ ಇದೀಗ ಲಕ್ಕಿ ಸ್ಕೀಂಗಳು ತಲೆ ಎತ್ತದ ಪರಿಸ್ಥಿತಿಗೆ ತಲುಪಿವೆ ಎಂದು ತಿಳಿದುಬಂದಿದೆ.

error: Content is protected !!