ಪೊಳಲಿ: ಬಪ್ಪನಾಡು ಜಾತ್ರಾಮಹೋತ್ಸವ ಸಂದರ್ಭ ಬ್ರಹ್ಮರಥ ಕುಸಿದಿರುವುದು ಭಕ್ತಗಣದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಭಕ್ತರು ಎಲ್ಲೆ ಮೀರಿ ವರ್ತಿಸಿ ದೇವರ ಅವಕೃಪೆಗೆ ಪಾತ್ರವಾಗಿರುವುದೇ ಇಂತಹಾ ಅನಿಷ್ಠ ಸಂಕೇತಗಳಿಗೆ ಕಾರಣ ಎನ್ನುವ ಬಗ್ಗೆ ಭಕ್ತರು ಚರ್ಚಿಸಲಾರಂಭಿಸಿದ್ದಾರೆ. ಅದರ ಬೆನ್ನಲ್ಲೇ ಇದೀಗ ಪೊಳಲಿಯ ಭಕ್ತರಿಗೂ ಆತಂಕ ಶುರುವಾಗಿದೆ.
ಯಾಕೆಂದರೆ ಪ್ರತೀವರ್ಷ ಮೂಲ ಕೆರೆಯಲ್ಲಿ ನಡೆಯುತ್ತಿದ್ದ ಪೊಳಲಿ ಸುಬ್ರಹ್ಮಣ್ಯ ದೇವರ ಜಳಕ ಈ ಬಾರಿ ಆ ಕೆರೆ ಜಲಸಮಾಧಿಯಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಕೆರೆಯಲ್ಲಿ ಜಳಕ ನಡೆದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೊಳಲಿ ಸುಬ್ರಹ್ಮಣ್ಯ ದೇವರಿಗೆ ಉತ್ಸವ ಬಲಿ ನಡೆದು ಮಳಲಿ(ಮಣೇಲ್) ಭಾಗದ ಫಲ್ಗುಣಿ ನದಿ ತಟದ ಮೂಲ ಜಳಕದ ಕೆರೆಯಲ್ಲಿ ಜಳಕ ನಡೆಯುತ್ತಿತ್ತು. ಆದರೆ ಈ ಬಾರಿ ನೂತನ ಸೇತುವೆಗೆ ಗೇಟು ಹಾಕಿರುವುದರಿಂದ ಅಲ್ಲದೆ ಅವ್ಯಾಹತ ಮರಳುಗಾರಿಕೆಯಿಂದ ಮೂಲ ಜಳಕದ ಕೆರೆ ಸಮಲಸಮಾಧಿಯಾಗಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಜಳಕದ ಕೆರೆಯಲ್ಲಿ ಸುಬ್ರಹ್ಮಣ್ಯನ ಜಳಕ ನಡೆಸಲಾಗಿದೆ.
ಹೀಗಾಗಿ ಬಪ್ಪನಾಡು ಬ್ರಹ್ಮರಥ ಕುಸಿದ ಬಳಿಕ ಪೊಳಲಿಯ ಭಕ್ತರಿಗೂ ಆತಂಕ ಶುರುವಾಗಿದೆ.

ಬಪ್ಪನಾಡು ಕ್ಷೇತ್ರದ ಜಾತ್ರೆಯ ಸಂದರ್ಭ ಕಳೆದ ವರ್ಷ ಕೆಲವು ಕಿಡಿಗೇಡಿಗಳು ಅತಿರೇಕದಿಂದ ವರ್ತಿಸುತ್ತಿದ್ದರು. ಕಳೆದ ವರ್ಷ ಭಕ್ತರು ಪಾರ್ಕ್ ಮಾಡಿದ್ದ ವಾಹನಗಳನ್ನು ಕಿಡಿಗೇಡಿಗಳು ದೂಡಿ ಹಾಕಿ ಹಾನಿ ಮಾಡಿದ್ದರು. ಇದೆಲ್ಲಾ ದೇವರ ಮುನಿಸಿಗೆ ಕಾರಣವಾಗಿದ್ದು, ಅದಕ್ಕಾಗಿಯೇ ಈ ಬಾರಿ ಬ್ರಹ್ಮರಥ ಕುಸಿದಿರಬಹುದು ಎಂದು ಭಕ್ತರು ಮಾತಾಡಿಕೊಳ್ಳುತ್ತಿದ್ದಾರೆ.

ಈ ಘಟನೆಯ ಬಳಿಕ ಇದೀಗ ಪೊಳಲಿಯ ಭಕ್ತರಿಗೂ ಆತಂಕ ಶುರುವಾಗಿದೆ. ಮಣೇಲ್ ಜಳಕದ ಕೆರೆ ಇದ್ದ ಜಾಗದಲ್ಲಿದ್ದ ಸ್ನಾನ ಘಟ್ಟ ನಾಶವಾಗಿದೆ. ಅಲ್ಲದೆ ವರ್ಷಂಪ್ರತಿ ನಡೆಸುತ್ತಿದ್ದ ಜಳಕದ ಕೆರೆಯನ್ನು ಬದಲಿಸಲಾಗಿದೆ. ಈ ಕೆರೆಯ ಮಣ್ಣು ಕೊಂಡು ಹೋಗಿ ಸುರತ ಮಹಾರಾಜ, ವೈಶ್ಯ, ಹಾಗೂ ಸಮಾಧಿ ಎನ್ನುವವರು ಪೊಳಲಿ ದೇಗುಲವನ್ನು ನಿರ್ಮಿಸಿದರು ಎನ್ನುವ ಐತಿಹ್ಯವಿದೆ. ಹೀಗಾಗಿ ಜಳಕದ ಕೆರೆಯನ್ನು ಯಾವುದೇ ಕಾರಣಕ್ಕೂ ಬದಲಿಸಬಾರದಿತ್ತು. ಮುಂದಿನ ಬಾರಿ ಜಾತ್ರೆ ನಡೆಯುವ ಮುಂಚೆ ಮೂಲ ಜಳಕದ ಕೆರೆಯನ್ನು ಅಭಿವೃದ್ಧಿಪಡಿಸಿ ಸುಬ್ರಹ್ಮಣ್ಯ ದೇವರ ಜಳಕ ಮಾಡಿಸಬೇಕು ಎಂದು ಬಪ್ಪನಾಡುವಿನಲ್ಲಿ ನಡೆದ ಘಟನೆಯ ಬೆನ್ನಲ್ಲೇ ಚರ್ಚಿಸಲಾರಂಭಿಸಿದ್ದಾರೆ.