ಮೂಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿದ್ದ ರಥೋತ್ಸವ ಸಂದರ್ಭ ಬ್ರಹ್ಮರಥೋತ್ಸವ ತೇರಿನ ಮೇಲ್ಬಾಗ ಕುಸಿದು ಬಿದ್ದಿರುವ ಘಟನೆಗೆ ಉಳಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಾಲಯದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಲ್ಲದೆ, ಕ್ಷೇತ್ರದ ವತಿಯಿಂದ ಸಭೆ ನಡೆಸಿ ವಿಚಾರ ವಿಮರ್ಶೆ ನಡೆಸುವಂತೆ ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ VOICE OF PUBLIC ಗೆ ಹೇಳಿಕೆ ನೀಡಿರುವ ಅವರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಾಲಯವು ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಜಾತ್ರೆಯ ಬ್ರಹ್ಮರಥೋತ್ಸವದ ವೇಳೆ ರಥಕ್ಕೆ ಹಾನಿಗಳಾಗುವುದು, ದೇವರ ಉತ್ಸವಕ್ಕೆ ಭಂಗ ಉಂಟಾಗುವುದು ಇತ್ಯಾದಿಗಳು ನಡೆಯುತ್ತಿದೆ. ಇಂತಹಾ ಘಟನೆಗಳು ಮೂಲ್ಕಿ ಸೀಮೆಯ ಬಂಭತ್ತು ಮಾಗಣೆಗಳಿಗೆ ಸೇರಿದ ಭಕ್ತರಲ್ಲಿ ದುಃಖ ಹಾಗೂ ಭಯ ಉಂಟು ಮಾಡಿದೆ. ಹಾಗಾಗಿ ಈ ಕುರಿತು ಸಂಬಂಧಪಟ್ಟ ಶ್ರೀಕ್ಷೇತ್ರದ ಆಡಳಿತ ವರ್ಗದವರು ತಕ್ಷಣ ಮಾಗಣೆಯ ಭಕ್ತರ ಸಭೆಯೊಂದನ್ನು ಕರೆದು ಪೂರ್ವಾಪರ ವಿಮರ್ಶೆ ನಡೆಸಬೇಕೆಂದು ಮೋಹನದಾಸ ಸುರತ್ಕಲ್ ಆಗ್ರಹಿಸಿದ್ದಾರೆ.