ಅಪಘಾತಕ್ಕೀಡಾದ ಹುಡುಗನಿಗೆ ಸಹಾಯ ಮಾಡಿದ ಪೊಲೀಸರಿಗೆ ಸುಳ್ಳು ಅಪವಾದ ಹೊರಿಸಿದ ಸೋಷಿಯಲ್‌ ಮೀಡಿಯಾ!

ಮಂಗಳೂರು: ಅಪಘಾತಕೀಡಾದ ಬಾಲಕನಿಗೆ ಸಹಾಯ ಮಾಡಿದ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಅಪವಾದಕ್ಕೀಡಾಗಿದ್ದು, ಇದೀಗ ಅಸಲಿ ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸ್‌ ಅಧಿಕಾರಿ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಎ.18ರಂದು ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರಿಗೆ ಮಂಗಳೂರು ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ಅವರು ಬಳಸುವ ಕಾರಿನಲ್ಲಿ ಸೈರನ್‌, ಎಮರ್ಜೆನ್ಸಿ ಲೈಟ್‌ ಹಾಕಿಕೊಂಡು ಡ್ರಾಪ್‌ ನೀಡಲಾಗಿದೆ. ಈ ಮೂಲಕ ಇಲಾಖೆಯ ವಾಹನವನ್ನು ಅನ್ಯ ಕಾರ್ಯಕ್ಕೆ ಬಳಸಲಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಮಂಗಳೂರು ನಗರ ಪೊಲೀಸ್‌ ಆಯುಕ್ತರ ಪ್ರಕಟಣೆ ಹೊರಬಿದ್ದಿದೆ. ಈ ಪ್ರಕಟಣೆಯಲ್ಲಿ ಪೊಲೀಸರು ಅಪಘಾತಕ್ಕೀಡಾದ ಹುಡುಗನಿಗೆ ಸಹಾಯ ಮಾಡಲು ಹೋಗಿರುವುದು ಬಹಿರಂಗಗೊಂಡಿದೆ.

ಸ್ಪಷ್ಟೀಕರಣದಲ್ಲಿ ಏನಿದೆ?

ಎ. 18 ರಂದು ಸಂಚಾರ ಬಂದೋಬಸ್ತು ಕರ್ತವ್ಯದಲ್ಲಿದ್ದ ಎ.ಸಿ.ಪಿ ಸಂಚಾರ ಉಪ ವಿಭಾಗದವರು ಪಡೀಲ್ ಕಡೆಯಿಂದ ಕಾರ್ಯಕ್ರಮದ ಸ್ಥಳದ ಕಡೆಗೆ ತಮ್ಮ ಇಲಾಖಾ ವಾಹನ ಮೂಲಕ ಬಂದು ಇಳಿದು ಅಲ್ಲಿ ಮುಖ್ಯ ದ್ವಾರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ್ದಾರೆ. ಆನಂತರ ಕಾರ್ಯಕ್ರಮ ಮುಗಿದ ಬಳಿಕ ಎಸಿಪಿ ಅವರು ಮಂಗಳೂರು ನಗರ ಕಡೆಗೆ ಸಂಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಬರಲು ಹೆದ್ದಾರಿಯ ರಸ್ತೆ ವಿಭಜಕ ದಾಟಿ ತನ್ನ ಚಾಲಕನಿಗೆ ಮುಂದೆ ಅಡ್ಯಾರು ಕಟ್ಟೆ ಬಳಿ ಯು ಟರ್ನ್ ಮಾಡಿ ವಾಪಸ್ಸು ಬರಲು ಸೂಚಿಸಿದ್ದರು. ವಾಹನ ಚಾಲಕ ಬೈರೇಗೌಡ ಅವರು ಅಡ್ಯಾರು ಕಟ್ಟೆ ಬಳಿ ಬ್ಯಾರಿಕೇಡ್ ಹಾಕಿದ್ದ ಕಾರಣ ಸಹ್ಯಾದ್ರಿ ಕಡೆ ಹೋಗುತ್ತಿದ್ದರು.

ಆದರೆ ಸ್ವಲ್ಪ ಸಮಯದ ಹಿಂದೆ ಅಡ್ಯಾರ್ ಗಾರ್ಡನ್ ಬಳಿ ಸಂಜೆ ಸುಮಾರು 730 ಗಂಟೆಗೆ ಟೆಂಪೋ ಟ್ರಾವೆಲರ್ ವಾಹನದ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ 16ರ ಹರೆಯದ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬಾಲಕ ಬಲ ಕಾಲಿನ ಪಾದದ ಮೇಲೆ ಚಕ್ರ ಹಾದುಹೋದ ಪರಿಣಾಮ ಆತ ಗಾಯಗೊಂಡು ಬಿದ್ದಿದ್ದು, ಅಲ್ಲಿ ಸುಮಾರು ಜನ ಸೇರಿದ್ದರು. ಅಲ್ಲೇ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಗಾಯಾಳುವಿನ ಕಡೆಯವರು ಎಸಿಪಿ ಅವರ ವಾಹನವನ್ನು ನಿಲ್ಲಿಸಿ, ಗಾಯಾಳುವನ್ನು ಅದೇ ವಾಹನದಲ್ಲಿ ಚಿಕಿತ್ಸೆಗಾಗಿ ಕಳುಹಿಸಿ, ನಗರದ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸದ್ದಾರೆ. ಅಪಘಾತ ಮಾಡಿರುವ ಟೆಂಪೋ ಟ್ರಾವೆಲರ್ ಸಂಖ್ಯೆ: ಕೆ.ಎ. 70 9888 ಮತ್ತು ಅದರ ಚಾಲಕನನ್ನು ಪೊಲೀಸ್ ಆನಂದ ಎಂಬವರ ಜೊತೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ ಎಂದು ಕಮಿಷನರ್‌ ಸ್ಪಷ್ಟೀಕರದಲ್ಲಿ ತಿಳಿಸಿದ್ದಾರೆ.

ಅಪಘಾತ ನಡೆದ ಸಮಯದಲ್ಲಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಅಪಘಾತಕ್ಕೀಡಾದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಅದೇ ಸಮಯದಲ್ಲಿ ಬರುತ್ತಿದ್ದ ಎಸಿಪಿ ಅವರ ವಾಹನದ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ. ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ (ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆಗೆ ಪೊಲೀಸ್ ಜೀಪಿನ ಚಾಲಕನೊಂದಿಗೆ ಕಳುಹಿಸಿದ್ದಾರೆ. ಮಹಿಳಾ ಸಿಬ್ಬಂದಿ ಕರ್ತವ್ಯ ಮುಂದುವರಿಸಿದ್ದಾರೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತನ್ನ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿದ್ದಾರೆ.

error: Content is protected !!