ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಸಂಯುಕ್ತ ಖಾಝಿಗಳ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶದಲ್ಲಿ ಜನಸಾಗರವೇ ನೆರೆದಿದೆ. ಬಿಸಿಲ ಝಳದ ನಡುವೆಯೂ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ಮೈದಾನದಲ್ಲಿ ಕಣ್ಣು ಹಾಯಿಸಿದಷ್ಟು ಜನರಿಂದ ತುಂಬಿದ್ದು, ಅಝಾದಿ ಘೋಷಣೆ ಮುಗಿಲುಮುಟ್ಟಿದೆ.
ಹೆದ್ದಾರಿಯುದ್ದಕ್ಕೂ ವಾಹನ ಸಂಚಾರ ನಿಧಾನಗತಿಯಲ್ಲಿ ಸಂಚರಿ ಸುತ್ತಿತ್ತು. ಇತ್ತ ನಗರದ ವಿವಿಧ ಕಡೆಗಳಲ್ಲಿ ಮಧ್ಯಾಹ್ನದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿತ್ತು. ಗುಡ್ ಫ್ರೈಡೆ ಆಗಿದ್ದರಿಂದ ಕ್ರೈಸ್ತರ ಅಂಗಡಿಗಳು ಮುಚ್ಚಿದ್ದವು. ಅಲ್ಲಲ್ಲಿ ಪೊಲೀಸ್ ವ್ಯವಸ್ಥೆ ನಿಯೋಜಿಸಲಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಂಡರು. ಅಡ್ಯಾರ್ ಸುತ್ತಮುತ್ತಲಿನ ಪ್ರದೇಶಗಳ ಜಂಕ್ಷನ್, ಕ್ರಾಸಿಂಗ್ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಪಹರೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಯಂ ಸೇವಕರು ತೆರವುಗೊಳಿಸುತ್ತಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದವರು ಆಝಾದಿ ಘೋಷಣೆಗಳನ್ನು ಕೂಗುತ್ತಾ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮೊಬೈಲ್ ನೆಟ್‌ವರ್ಕ್ ಬಹುತೇಕವಾಗಿ ಜಾಮ್ ಆಗಿದ್ದು, ಸಂಪರ್ಕ, ಸಂವಹನಕ್ಕೆ ಅಡ್ಡಿಯಾ ಯಿತು.
ಸಮಾವೇಶದ ಪ್ರತಿ ಹಂತದ ಚಿತ್ರೀಕರಣಕ್ಕೆ ವೀಡಿಗ್ರಾಫರ್‌ಗಳ ನಿಯೋಜನೆ ಮಾಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಡ್ರೋನ್ ಮೂಲಕ ಕಣ್ಗಾವಲೂ ಇರಿಸಲಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಉಂಟು ಮಾಡದಂತೆ ಆಯೋಜಕರು ಆಗಾಗ್ಗೆ ಧ್ವನಿ ವರ್ಧಕ ಮೂಲಕ ಸೂಚನೆ ನೀಡುತ್ತಿದ್ದಾರೆ. ಅಲ್ಲಲ್ಲಿ ರಾಷ್ಟ್ರ ಧ್ವಜ ಹಾರಾಟ ನಡೆಸಲಾಗುತ್ತಿದೆ. ದಕ್ಷಿಣ ಕರ್ನಾಟಕದ ಬಹುತೇಕ ಮುಸ್ಲಿಮರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇದೊಂದು ಹೊಸ ದಾಖಲೆ ಸೃಷ್ಟಿಸಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ