ನಾಯಿ ಖರೀದಿಸಲು ಹಣ ಕೊಡದ ತಾಯಿಯ ಕೊಂದೇ ಬಿಟ್ಟ ಮಗ

ರಾಯ್‌ಪುರ (ಛತ್ತೀಸಗಢ): ನಾಯಿ ಖರೀದಿಸಲು ಹಣ ಕೊಡಲಿಲ್ಲವೆಂದು ಕಿಡಿಗೇಡಿಯೊಬ್ಬ, ತನ್ನ ತಾಯಿಯನ್ನೇ ಕೊಲೆ ಮಾಡಿರುವ ಪ್ರಕರಣ ಛತ್ತೀಸಗಢದ ರಾಯ್‌ಪುರದಲ್ಲಿ ಶುಕ್ರವಾರ ನಡೆದಿದೆ. ಉರ್ಲಾ ಠಾಣೆ ವ್ಯಾಪ್ತಿಯ ನಾಗೇಶ್ವರ ನಗರದಲ್ಲಿ ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದಿದೆ ಎಂದು ಠಾಣಾಧಿಕಾರಿ ಬಿ.ಎಲ್‌. ಚಂದ್ರಾಕರ್‌ ಹೇಳಿದ್ದಾರೆ.

ಆರೋಪಿ ಪ್ರದೀಪ್‌ ದೇವಾಂಗನ್‌ (45) ₹ 800ಕ್ಕೆ ನಾಯಿ ಮರಿಯೊಂದನ್ನು ಕೊಂಡುಕೊಳ್ಳಲು ಮುಂದಾಗಿದ್ದ. ಆದರೆ, ಆತನ ಬಳಿ ₹ 200 ಕಡಿಮೆ ಇತ್ತು. ಹಾಗಾಗಿ ತಾಯಿ ಗಣೇಶಿ (70) ಅವರನ್ನು ಹಣ ಕೇಳಿದ್ದ. ಆದರೆ, ಅವರು ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ, ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ, ತನ್ನ ಪತ್ನಿ ರಾಮೇಶ್ವರಿ ಅವರ ಮೇಲೂ ದಾಳಿ ಮಾಡಿರುವ ಆತ, ನೆರೆಹೊರೆಯವರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಚಂದ್ರಾಕರ್‌ ವಿವರಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಂತ್ರಸ್ತ ಮಹಿಳೆಯರಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ವೇಳೆ ಗಣೇಶಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದೂ ಹೇಳಿದ್ದಾರೆ. ಆಟೋ ಚಾಲಕನಾಗಿರುವ ಆರೋಪಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಪುತ್ರಿ ಇದ್ದಾಳೆ.

error: Content is protected !!