ಮುಂಬೈ: ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ತಾನು ಸ್ವರ್ಗದಲ್ಲಿ ಇಂದ್ರನ ಸಿಂಹಾಸನದಲ್ಲಿ ಕುಣಿಯುವ ಊರ್ವಶಿ ಎಂದು ಭಾವಿಸಿಕೊಂಡಿದ್ದಾರೋ ಏನೋ? ಯಾಕೆಂದರೆ ಇತ್ತೀಚೆಗೆ ಆಕೆ ನಾನು ದೇವತೆ, ಬದರಿನಾಥದಲ್ಲಿ ನನ್ನ ದೇಗುಲವಿದೆ. ನನಗೆ ದಕ್ಷಿಣ ಭಾರತದಲ್ಲಿ ದೇವಸ್ಥಾನ ಕಟ್ಟಿಸಿಕೊಡಿ ಎಂದು ಹೇಳಿಕೆ ನೀಡಿ ಟ್ರೋಲಿಗರ ಆಹಾರವಾಗಿದ್ದಾರೆ.
ಸಂರ್ದಶನವೊಂದರಲ್ಲಿ ಮಾತನಾಡಿದ ಊರ್ವಶಿ, ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ‘ಊರ್ವಶಿ’ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ. ಇದು ನನಗೆ ಸಮರ್ಪಿಸಲಾಗಿದೆ ಎಂದಿದ್ದಾರೆ. ದಕ್ಷಿಣ ಭಾರತದಲ್ಲೂ ನನ್ನ ಹೆಸರಿನಲ್ಲಿ ಒಂದು ದೇವಸ್ಥಾನ ಆಗಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆ ನಿರೂಪಕ, ಜನರು ದರ್ಶನ ಪಡೆಯಲು ನಿಮ್ಮ ದೇವಸ್ಥಾನಕ್ಕೆ ಹೋಗುತ್ತಾರೆಯೇ ಎಂದು ಕೇಳಾದ ಪ್ರಶ್ನೆಗೆ ಊರ್ವಶಿ ನಗುತ್ತಾ, ಈಗಾಗಲೇ ದೇವಸ್ಥಾನ ಇರೋದರಿಂದ ಜನರು ದೇವಾಲಯದಲ್ಲಿ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಅವರಿಗೆ ಪ್ರಾರ್ಥಿಸುತ್ತಾರೆ ಮತ್ತು ಅವರ ಫೋಟೋಗಳಿಗೆ ಹೂಮಾಲೆಗಳನ್ನು ಅರ್ಪಿಸುತ್ತಾರೆ ಎಂದು ಉತ್ತರಿಸಿದ್ದಾರೆ. ಈ ವೇಳೆ, ಅವರನ್ನು ಜನರು ‘ದಂದಮಾ ಮಾಯಿ’ ಕರೆಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಅಂದಹಾಗೆ, ಸನ್ನಿ ಡಿಯೋಲ್ ನಟನೆಯ ‘ಜಟ್’ ಸಿನಿಮಾದಲ್ಲಿ ಊರ್ವಶಿ ರೌಟೇಲಾ ಸೊಂಟ ಬಳುಕಿಸಿದ್ದಾರೆ. ಈ ಸಿನಿಮಾ ಏ.10ರಂದು ತೆರೆಕಂಡಿತ್ತು.