ಜಲಂಧರ್: ‘ಜಾಟ್’ ಚಿತ್ರದಲ್ಲಿನ ಒಂದು ದೃಶ್ಯವು ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ದೂರಿನ ಮೇರೆಗೆ ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ ಮತ್ತು ಇತರ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್ 10 ರಂದು ಬಿಡುಗಡೆಯಾದ ‘ಜಾಟ್’ ಚಿತ್ರದಲ್ಲಿ ಯೇಸುಕ್ರಿಸ್ತ ಮತ್ತು ಕ್ರೈಸ್ತ ಧಾರ್ಮಿಕ ಆಚರಣೆಗಳನ್ನು ಅಗೌರವಿಸುವ ದೃಶ್ಯಗಳಿವೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ. ನಟರಾದ ಸನ್ನಿ ಡಿಯೋಲ್, ರಣದೀಪ್ ಹೂಡಾ ಮತ್ತು ವಿನೀತ್ ಕುಮಾರ್, ನಿರ್ದೇಶಕ ಗೋಪಿಚಂದ್ ಮತ್ತು ನಿರ್ಮಾಪಕ ನವೀನ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಜಲಂಧರ್ ದಂಡು ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ವಿಕ್ಲವ್ ಗೋಲ್ಡ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗುಡ್ ಫ್ರೈಡೆ ಆಸುಪಾಸಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.