ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ ನೇರ್ಯಮಂಗಲಂ ಮಣಿಯಾಂಪಾರದಲ್ಲಿ ನಡೆದಿದೆ. ಇಡುಕ್ಕಿ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ ಬಾಲಕಿ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ. ನೇರ್ಯಮಂಗಲಂನಿಂದ ಇಡುಕ್ಕಿಗೆ ಹೋಗುವ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಬದಿಯ ಕ್ರ್ಯಾಶ್ ಬ್ಯಾರಿಯರ್ಗೆ ಡಿಕ್ಕಿ ಹೊಡೆದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಈ ಬಸ್ ಕಟ್ಟಪ್ಪನದಿಂದ ಎರ್ನಾಕುಲಂಗೆ ಬರುತ್ತಿದ್ದು, ಅಪಘಾತಕ್ಕೀಗಿ ರಸ್ತೆ ಪಕ್ಕದ ಸುಮಾರು 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಾಗ ಬಾಲಕಿ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟಳು. ಆಗ ಬಾಲಕಿ ಬಸ್ಸಿನಡಿ ಸಿಲುಕಿದ ಪರಿಣಾಮ ಬಾಲಕಿಯ ಜೀವ ಹೋಗಿದೆ. ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಿ ಕೂಡಲೇ ಬಾಲಕಿ ಅನಿಂಟಾ ಬೆನ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಿಕೊಳ್ಳಲಾಗಲಿಲ್ಲ, ಬಸ್ಸಿನಲ್ಲಿ ಸಿಲುಕಿದ್ದ ಇತರ ಪ್ರಯಾಣಿಕರನ್ನು ಕೂಡಲೇ ಹೊರತೆಗೆಯಲಾಯಿತು.
ಅಗ್ನಿಶಾಮಕ ದಳ ಸೇರಿದಂತೆ ಹಲವು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬಸ್ಸಿನಲ್ಲಿ ಹಲವಾರು ಪ್ರಯಾಣಿಕರಿದ್ದರು.