ಪೊಳಲಿ: ಮೂಲ ಕೆರೆಯಲ್ಲಿ ನಡೆಯದ ಸುಬ್ರಹ್ಮಣ್ಯನ ಜಳಕ, ಜಲಸಮಾಧಿಯಾಯ್ತಾ ಮೂಲ ಕೆರೆ!?

ಪೊಳಲಿ: ಪ್ರತೀವರ್ಷ ಮೂಲ ಕೆರೆಯಲ್ಲಿ ನಡೆಯುತ್ತಿದ್ದ ಪೊಳಲಿ ಸುಬ್ರಹ್ಮಣ್ಯ ದೇವರ ಜಳಕ ಕೆರೆ ನಾಶವಾಗಿ ಈ ಬಾರಿ ತಾತ್ಕಾಲಿಕವಾಗಿ ನಿರ್ಮಿಸಿದ ಕೆರೆಯಲ್ಲಿ ನಡೆದಿರುವುದು, ಭಕ್ತರಿಗೆ ತೀವ್ರ ಆಘಾತವಾಗಿದೆ.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಈ ಬಾರಿ 28 ದಿನಗಳ ಜಾತ್ರೆ ನಡೆದಿದ್ದು ಶುಕ್ರವಾರ ಜಳಕ ನಡೆದು, ಧ್ವಜಾವರೋಹಣದ ಬಳಿಕ ಜಾತ್ರೆ ಮುಕ್ತಾಯಗೊಂಡಿದೆ. ಪೊಳಲಿಯಲ್ಲಿ ಸುಬ್ರಹ್ಮಣ್ಯ ದೇವರಿಗೆ ಉತ್ಸವ ಬಲಿ ನಡೆಯುತ್ತದೆ. ಸುಬ್ರಹ್ಮಣ್ಯ ದೇವರ ಜಳಕ ನಡೆಯುವುದು ಮಳಲಿ(ಮಣೇಲ್) ಭಾಗದಲ್ಲಿ. ಇಲ್ಲಿ ಪ್ರಾಚೀನ ಕಾಲದಲ್ಲಿ ಸ್ನಾನಘಟ್ಟ ಇದ್ದು, ಪಕ್ಕದಲ್ಲಿ ದೇವರ ಜಳಕದ ಕೆರೆ ಇತ್ತು. ಕಳೆದ ವರ್ಷವೂ ಮೂಲ ಕೆರೆಯಲ್ಲೇ ಜಳಕ ನಡೆಸಲಾಗಿತ್ತು. ಆದರೆ ಸ್ನಾನ ಘಟ್ಟ ನೆರೆಯಿಂದ ನಾಶವಾದ ಬಳಿಕ ಜಳಕದ ಕೆರೆ ಮಾತ್ರ ಸಣ್ಣದಾಗಿ ಉಳಿಸಲಾಗಿತ್ತು.


ಆದರೆ ಈ ಬಾರಿ ನದಿಗೆ ಗೇಟು ಹಾಕಿರುವುದರಿಂದ ನೀರಿನಿಂದ ತುಂಬಿದ್ದು, ದೇವರ ಮೂಲ ಜಳಕದ ಕೆರೆ ಜಲಸಮಾಧಿಯಾಗಿದೆ. ಹೀಗಾಗಿ ಕಿರು ಸೇತುವೆಯ ಸಮೀಪ ಸಣ್ಣದೊಂದು ಗುಂಡಿ ತೆಗೆದು ಅದಕ್ಕೆ ರಿಂಗ್‌ ಮುಚ್ಚಿ ತಾತ್ಕಾಲಿಕ ಕೆರೆಯಲ್ಲಿ ದೇವರ ಜಳಕ ನಡೆಸಲಾಗಿದೆ. ಮೂಲ ಕೆರೆಯಲ್ಲಿ ಜಳಕ ನಡೆಯದ ಕಾರಣ ಭಕ್ತರಿಗೆ ಅತೀವ ಬೇಸರಕ್ಕೆ ಕಾರಣವಾಗಿದೆ.

ಪೌರಾಣಿಕ, ಐತಿಹಾಸ ಇರುವ ಕೆರೆ:
ಮಣೇಲ್ ಜಳಕದ ಕೆರೆ ಇರುವ ಜಾಗದಲ್ಲಿ ಸ್ನಾನ ಘಟ್ಟ ಇದ್ದು ಭಕ್ತರು ಇಲ್ಲಿ ಪುಣ್ಯಸ್ನಾನ ಮಾಡಿ ಪೊಳಲಿಗೆ ತೆರಳುತ್ತಿದ್ದರು ಎನ್ನಲಾಗತ್ತಿದೆ. ಉಳ್ಳಾಲ ಅಬ್ಬಕ್ಕ ರಾಣಿಯ ತವರು ಮನೆ ಮಣೇಲ್ ಆಗಿದ್ದು, ಆಕೆ ಉಳ್ಳಾಲದಿಂದ ದೋಣಿಯ ಮೂಲಕ ಇದರ ಪಕ್ಕದಲ್ಲೇ ಬರುತ್ತಿದ್ದಳು ಎನ್ನುವುದು ಇತಿಹಾಸಗಳಿಂದ ತಿಳಿದುಬರುತ್ತದೆ.

ಮೂಲ‌ ಕೆರೆಯ ಪೌರಾಣಿಕ ಹಿನ್ನೆಲೆ ಏನು? :
ಪೊಳಲಿ ದೇಗುಲವನ್ನು ಸುರತ ಮಹಾರಾಜ, ವೈಶ್ಯ, ಹಾಗೂ ಸಮಾಧಿ ಎನ್ನುವವರು ಸೇರಿ ನಿರ್ಮಿಸಿದರು ಎನ್ನುವ ಐತಿಹ್ಯವಿದೆ‌. ಈ ಮೂವರ ಗುರುಗಳಾದ ಸುಮೇಧ ಮಹರ್ಷಿಗೆ ದುರ್ಗಾಪರಮೇಶ್ವರಿ ಒಲಿದ ಜಾಗ ಇದೇ ಆಗಿದ್ದು, ಇಲ್ಲಿಯೇ ಅವರ ಆಶ್ರಮವೂ ಇತ್ತು. ಮೊದಲು ಜಳಕದ ಕೆರೆ ಇದ್ದ ಜಾಗದಿಂದಲೇ ಮಣ್ಣು ಕೊಂಡು ಹೋಗಿ ಸುರತ, ವೈಶ್ಯ, ಸಮಾಧಿ ಸೇರಿ ಪೊಳಲಿ ಯಲ್ಲಿ ತಾಯಿ ರಾಜರಾಜೇಶ್ವರಿ, ಸುಬ್ರಹ್ಮಣ್ಯ, ಗಣಪತಿ ಹಾಗೂ ಇತರ ದೇವರ ವಿಗ್ರಹಗಳನ್ನು ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ದುರ್ಗಾಪರಮೇಶ್ವರಿ ದೇವಿಯ ಭೇಟಿಗಾಗಿಯೇ ಸುಬ್ರಹ್ಮಣ್ಯ ದೇವರ ಜಳಕದ ಉದ್ದೇಶವಾಗಿದೆ‌ ಎನ್ನುವುದು ಶೀನಪ್ಪ ಹೆಗಡೆಯವರ ಪುಳಿನಾಪುರ ಮಹಾತ್ಮೆ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಮೊದಲು ಇದ್ದ ಜಳಕದ ಕೆರೆಗೆ ಪೌರಾಣಿಕ ಹಿನ್ನೆಲೆ ಇದೆ‌. ಪುರಾತನ ಕಾಲದಿಂದಲೂ ಸುಬ್ರಹ್ಮಣ್ಯನ ಮೊದಲು ಇದ್ದ ಕೆರೆಯಲ್ಲೇ ನಡೆಯುತ್ತಿತ್ತು. ಮಣೇಲ್ ಸೂರ್ಯನಾರಾಯಣ ದೇವರ ಅಷ್ಠ ಮಂಗಲ ಚಿಂತನೆಯಲ್ಲೂ ಪೌರಾಣಿಕ ಜಳಕದ ಕೆರೆ ನಾಶವಾಗಿದ್ದು, ಅದನ್ನು ಪುನರ್ನಿಮಿಸಬೇಕು ಎನ್ನುವುದಾಗಿ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಮಾತ್ರ ಪರ್ಯಾಯ ಕೆರೆಯಲ್ಲಿ ಜಳಕ ನಡೆಸಿ ಪೌರಾಣಿಕ ಹಿನ್ನೆಲೆಗೆ ಅಪಚಾರ ಎಸಗಲಾಗಿದೆ ಎನ್ನುವುದು ಭಕ್ತರ ಆಕ್ರೋಶಕ್ಕೆ ಕಾರಣ. ಈ ಬಾರಿ ಕೆರೆಯನ್ನು ಜಲಸಮಾಧಿ ಮಾಡಿ ಐತಿಹಾಸಿಕ ಹಿನ್ನೆಲೆಗೆ ಧಕ್ಕೆ ತರಲಾಗಿದೆ ಎನ್ನುವುದು ಭಕ್ತರ ಆಕ್ರೋಶಕ್ಕೆ‌ ಕಾರಣವಾಗಿದೆ.

ಮರಳು ಮಾಫಿಯಾ:
ಜಳಕ ಕೆರೆ ಇರುವ ಭಾಗದಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಇದರ ಪಕ್ಕದಲ್ಲೆ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಮರಳು ಹೂಳೆತ್ತಿರುವುದರಿಂದ ಕೆರೆ ಇದ್ದ ಜಾಗ ಗುಂಡಿ ಬಿದ್ದಿದ್ದು, ಸೇತುವೆಗೂ ಅಪಾಯಕಾರಿಯಾಗಿ ಪರಿಣಮಿಸಿದೆ ಅಲ್ಲದೆ, ಕೆರೆಯ‌ ನಾಶಕ್ಕೂ ಕಾರಣ ವಾಗಿದೆ.

ಹಲವು ವರ್ಷಗಳಿಂದ
ಜಳಕದ ಕೆರೆಗೆ ಆಗ್ರಹ:
ಪೊಳಲಿಯ ಬ್ರಹ್ಮ ಕಲಶ ಆಗುವ ಮುಂಚೆಯೇ ಇಲ್ಲಿ ಜಳಕದ ಕೆರೆ ನಿರ್ಮಿಸುವಂತೆ ಭಕ್ತರು ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಬ್ರಹ್ಮಕಳಸ ಆಗಿ ಇಷ್ಟು ವರ್ಷವಾದರೂ ಜಳಕದ ಕೆರೆ ಆಗಿಲ್ಲ, ಇಲ್ಲಿ ಕಿರು ಸೇತುವೆ ನಿರ್ಮಾಣವಾದರೂ ಜಳಕದ ಕೆರೆ ನಿರ್ಮಾಣವಾಗಿಲ್ಲ ಎನ್ನುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ‌. ಅಲ್ಲದೆ ಮಳಲಿ ಸೂರ್ಯನಾರಾಯಣ ದೇವರ ಅಷ್ಠಮಂಗಳ ಚಿಂತನೆಯಲ್ಲೂ ಮೊತ್ತಮೊದಲು ಕೆರೆ ನಿರ್ಮಿಸಬೇಕು, ಊರಿಗೆ ಸುಭೀಕ್ಷೆಯಾಗುತ್ತದೆ ಎಂದು ಕಾಣಿಸಿಕೊಂಡಿತ್ತು. ಹಾಗಾಗಿ ಈ ಬಾರಿಯಾದರೂ ಸುಂದರವಾದ ಸ್ನಾನ ಘಟ್ಟ ನಿರ್ಮಿಸಿ ದೇವರ ಮೂಲ ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿದ್ದಾರೆ.

ಮುಂದಿನ ವರ್ಷ ಮೂಲ‌
ಕೆರೆಯಲ್ಲೇ ಜಳಕ ನಡೆಯಲಿ:
ದೇವರ ಜಳಕದ ದಿನ ನೂರಾರು ಭಕ್ತರು ಬಂದಿದ್ದು, ಮೂಲ ಕೆರೆಯಲ್ಲಿ ಜಳಕ ನಡೆಯದಿರುವುದನ್ನು ಕಂಡು ಭಕ್ತರು ಆಘಾತಕ್ಕೀಡಾದರು.‌ ನಮಗೆ ಇಷ್ಟೆಲ್ಲಾ ಅಪಸವ್ಯಗಳು ನಡೆದಿರುವುದು ಗೊತ್ತೇ ಇರಲಿಲ್ಲ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷದ ಒಳಗಡೆ ಜಲಕದ ಕೆರೆಯ ಅಭಿವೃದ್ಧಿಗೊಳಿಸಬೇಕು. ಪೊಳಲಿ ‘ಎ’ ಗ್ರೇಡ್ ದೇವಸ್ಥಾನವಾಗಿದ್ದು, ಕೋಟ್ಯಂತರ ರೂಪಾಯಿ ಹಣ ಹರಕೆ,‌ ಕಾಣಿಕೆಗಳಿಂದ ಬರುತ್ತಿದೆ. ಅಲ್ಲದೆ ಪೊಳಲಿ ದೇವರ ಪರಮ ಭಕ್ತ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಬಂಟ್ವಾಳದ ಶಾಸಕರಾಗಿದ್ದು, ಮನಸ್ಸು ಮಾಡಿದರೆ ಸರ್ಕಾರದ ಅನುದಾನ ತಂದು ದೇವರ‌ ಮೂಲ ಕೆರೆಯನ್ನು ಅಭಿವೃದ್ಧಿಗೊಳಿಸುವುದು ದೊಡ್ಡ ವಿಷಯವಲ್ಲ ಎಂದು ಭಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!