ಮಂಗಳೂರು: ಅಕ್ರಮ ಚಿನ್ನದ ಗಟ್ಟಿ ಮಾರಾಟಕ್ಕೆ ಸಂಬಂಧಿಸಿ ಇಬ್ಬರನ್ನು ಉಪಾಯದಿಂದ ಕರೆಸಿ ಮಲಗಿದ್ದಾಗ ಚೂರಿಯಿಂದ ಇರಿದು ಕೊಲೆಗೈದಿದ್ದ ಪ್ರಕರಣದ ಮೂವರ ವಿರುದ್ಧದ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಕಾಸರಗೋಡು ತಾಲೂಕು ಚೆರ್ಕಳ ಮುಹಮ್ಮದ್ ಮುಹಜೀರ್ ಸನಾಫ್ (34), ಕಾಸರಗೋಡು ಆಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಎ.ಮುಹಮ್ಮದ್ ಇರ್ಷಾದ್ (35), ಎ.ಮುಹಮ್ಮದ್ ಸಫ್ವಾನ್ (35) ಶಿಕ್ಷೆಗೊಳಗಾದ ಅಪರಾಧಿಗಳು. ನಾಫೀರ್ ಹಾಗೂ ಪಹೀಮ್ ಕೊಲೆಯಾದವರು.
ಅಪರಾಧಿಗಳು 2014 ಮೇ 15ರಂದು ಅತ್ತಾವರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಮರುದಿನ ನಾಫೀರ್ ಮತ್ತು ಫಹೀಮ್ ಅವರನ್ನು ಕಾರಿನಲ್ಲಿ ಅತ್ತಾವರದಲ್ಲಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದರು. ಜು.1ರಂದು ಬೆಳಗ್ಗೆ ಗಾಢ ನಿದ್ರೆಯಲ್ಲಿದ್ದ ಫಹೀಮ್ ಮತ್ತು ನಫೀರ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಇಬ್ಬರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಮೊದಲೇ ಜಾಗ ಖರೀದಿಸಿ ಹೊಂಡ ತೋಡಿ ಸಿದ್ದಪಡಿಸಿದ್ದ ಸ್ಥಳದಲ್ಲಿ ಹೂತು ಹಾಕಿ ಸಾಕ್ಷ ನಾಶ ಮಾಡಲು ಯತ್ನಿಸಿದ್ದರು. ನಫೀರ್ ಮತ್ತು ಫಹೀಮ್ ಮಲಗಿದ್ದ ಕೋಣೆಗಳನ್ನು ಸ್ವಚ್ಛಗೊಳಿಸಿ, ರಕ್ತ ಸಿಕ್ತ ಹಾಸಿಗೆ, ಬಟ್ಟೆಗಳನ್ನು ಕಾರಿನಲ್ಲಿ ತುಂಬಿಸಿ ಕಾಸರಗೋಡು ಚಂದ್ರಗಿರಿ ನದಿಗೆ ಹಾಕಿ ಸಾಕ್ಷ ನಾಶ ಮಾಡಿದ್ದರು. ಜು.6ರಂದು ಉಳಿದ ಬಟ್ಟೆಗಳನ್ನು ಕಪ್ಪು ಬಣ್ಣದ ಗಾರ್ಬೇಜ್ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಕೊಂಡೊ ಯ್ಯುತ್ತಿದ್ದಾಗ ಆಗಿನ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಅವರಿಗೆ ಮಹಾಕಾಳಿ ಪಡ್ಪು ಬಳಿ ಸಿಕ್ಕಿ ಬಿದ್ದಿದ್ದರು. ಬಳಿಕ ದಕ್ಷಿಣ ಠಾಣೆಯ ಠಾಣಾಧಿಕಾರಿಯಾಗಿದ್ದ ದಿನಕರ್ ಶೆಟ್ಟಿ ಅವರ ಎದುರು ಹಾಜರುಪಡಿಸಿದ್ದರು. ಶವ ಹೂತ ಸ್ಥಳವಾದ ಕಾಸರಗೋಡಿನ ಬೇಡಡ್ಕ ಗ್ರಾಮದ ಶಂಕರಂಕಾಡು ಎಂಬಲ್ಲಿಗೆ ಅಪರಾಧಿಗಳೊಂದಿಗೆ ತೆರಳಿ ಕಾಸರಗೋಡು ತಹಶೀಲ್ದಾರರ ಸಮಕ್ಷಮ ಶವವನ್ನು ಹೂತ ಸ್ಥಳದಿಂದ ತೆಗೆದು ಶವಪರೀಕ್ಷೆ ನಡೆಸಿ ನಫೀರ್‌ನಿಗೆ ಸಂಬಂಧಪಟ್ಟ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡಿದ್ದ ವ್ಯಾಪಾರಿಯಿಂದ ಸುಮಾರು 2.500 ಕಿ.ಗ್ರಾಂ ಮತ್ತು ಅಪರಾಧಿಯ ಮನೆಯಿಂದ 200 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡು 47 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ ಒಟ್ಟು 97 ದಾಖಲೆಗಳನ್ನು ಗುರುತಿಸಲಾಗಿದೆ. ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ನಿವೃತ್ತ ಸರ್ಕಾರಿ ಅಭಿಯೋಜಕ ರಾಜು ಪೂಜಾರಿ 14 ಸಾಕ್ಷಿದಾರರ ವಿಚಾರಣೆ ಮಾಡಿದ್ದು, ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಉಳಿದ ಸಾಕ್ಷಿ ವಿಚಾರಣೆ ನಡೆಸಿ, ಸರಕಾರದ ಪರ ವಾದ ನಡೆಸಿದ್ದರು