ಚಂಡೀಗಢ: ಪಂಜಾಬ್‌ನ ಜಲಂಧರ್‌ನಲ್ಲಿರುವ ಬಿಜೆಪಿ ನಾಯಕನ ಮನೆ ಮೇಲೆ ನಡೆದ ಗ್ರೆನೇಡ್ ದಾಳಿ ಸಂಚುಕೋರ ಜೀಶನ್ ಅಖ್ತರ್‌ನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಈತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಚರ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ. ಮಾಜಿ ಸಚಿವ ಮತ್ತು ಮಾಜಿ ರಾಜ್ಯ ಬಿಜೆಪಿ ಮುಖ್ಯಸ್ಥರೂ ಆಗಿದ್ದ ಕಾಲಿಯಾ ಅವರ ಮನೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ಗೋಡೆಗೆ ಹಾನಿಯಾಗಿತ್ತು.
ಅವರ ಮನೆ ಮತ್ತು ವಾಹನಗಳ ಗಾಜಿನ ಕಿಟಕಿಗಳು ಪುಡಿಪುಡಿಯಾಗಿದ್ದವು. ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಆ ಸಮಯದಲ್ಲಿ ಬಿಜೆಪಿ ಮುಖಂಡರೂ ಮನೆಯಲ್ಲಿದ್ದರು. ಗ್ರೆನೇಡ್ ಎಸೆದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಲಾದ ಇ-ರಿಕ್ಷಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.