ಬೆಚ್ಚಿಬೀಳಿಸುವ ಸುದ್ದಿ: ವಾರಣಾಸಿಯಲ್ಲಿ 22 ಮಂದಿ ದುರಳರಿಂದ 19ರ ಯುವತಿಯ ಗ್ಯಾಂಗ್‌ ರೇಪ್

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ವಾರಣಾಸಿ ಪಟ್ಟಣದಲ್ಲಿ ಏಳು ದಿನಗಳ ಅವಧಿಯಲ್ಲಿ 19 ವರ್ಷದ ಯುವತಿಯನ್ನು 22 ಜನರು ಅಪಹರಿಸಿ ವಿವಿಧ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಶೋಧ ಆರಂಭಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮಾರ್ಚ್ 29 ರಂದು ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ರಾಜ್ ವಿಶ್ವಕರ್ಮ ಎಂಬಾತ ಮಹಿಳೆಯನ್ನು ಅಪಹರಿಸಿದ್ದ. ವಿಶ್ವಕರ್ಮ ಆಕೆಯನ್ನು ಕೆಫೆಯೊಂದಕ್ಕೆ ಕರೆದೊಯ್ದು ನಿದ್ರೆಯ ಔಷಧ ನೀಡಿ, ಅತ್ಯಾಚಾರ ಮಾಡಿ ಮರುದಿನ ರಸ್ತೆಗೆ ಎಸೆದು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಾರ್ಚ್ 30 ರಂದು ಮತ್ತೊಮ್ಮೆ ಇಬ್ಬರು ಯುವಕರು ಸಂತ್ರಸ್ತೆಯನ್ನು ಅಪಹರಿಸಿ ಹೆದ್ದಾರಿಯ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂದಿನ ಕೆಲವು ದಿನಗಳಲ್ಲಿ ಸಂತ್ರಸ್ತೆಯ ಮೇಲೆ ಇತರ ಹಲವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮೊದಲೇ ಉಪಾಯ ಹೆಣೆದು ಅತ್ಯಾಚಾರ ನಡೆಸಿದ್ದಾಗಿ ತಿಳಿದುಬಂದಿದೆ. ಆರೋಪಿಗಳು ಮೊದಲು ಆಕೆಗೆ ನಿದ್ರೆಯ ಔಷಧಿಗಳನ್ನು ನೀಡಿ ನಂತರ ಲೈಂಗಿಕ ದೌರ್ಜನ್ಯ ಎಸಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುತ್ತಾರೆ. ಅದೇ ವೇಳೆ ಮತ್ತೊಬ್ಬ ಬಂದು ಆಕೆಯನ್ನು ಅಪಹರಿಸಿ ಆತನೂ ನಿದ್ದೆಯ ಮಾತ್ರೆ ನೀಡಿ ಅತ್ಯಾಚಾರ ಎಸಗುತ್ತಿದ್ದ. ಈ ಸರಣಿ ಮುಂದುವರಿಯತ್ತಾ ಸಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಏಪ್ರಿಲ್ ನಾಲ್ಕನೇ ತಾರೀಖು ಆಕೆ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.

ಸಂತ್ರಸ್ತೆ ಮಾರ್ಚ್ 29 ರಂದು ಮನೆಯಿಂದ ಹೊರಟು ಏಪ್ರಿಲ್ 4 ರಂದು ಮನೆಗೆ ಬಂದು ಘಟನೆಯ ಬಗ್ಗೆ ತನ್ನ ತಾಯಿಗೆ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

ಮಹಿಳೆಗೆ ಕೆಲವು ಆರೋಪಿಗಳ ಪರಿಚಯವಿದ್ದು, ಆಕೆಯ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಇತರರನ್ನು ಬಂಧಿಸಲು ಹುಡುಕಾಟ ಆರಂಭಿಸಲಾಗಿದೆ” ಎಂದು ವಾರಣಾಸಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!