ಲಕ್ನೋ: ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ಆಸ್ಮಾ ಖಾನ್ (42) ಎಂದು ಗುರುತಿಸಲಾಗಿದೆ, ಹತ್ಯೆಗೈದ ಆರೋಪಿಯನ್ನು ನೂರುಲ್ಲಾ ಹೈದರ್ ಎಂದು ಗುರುತಿಸಲಾಗಿದೆ.
ಹತ್ಯೆಯಾದ ಮಹಿಳೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ನೋಯ್ಡಾದ ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಬಿಹಾರ ಮೂಲದವನಾಗಿದ್ದು, ಎಂಜಿನಿಯರಿಂಗ್ ಪದವೀಧರನಾಗಿದ್ದೂ ಸಹ ನಿರುದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ. ಇಬ್ಬರು 2005 ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಘಟನೆಯ ಬಳಿಕ ದಂಪತಿಯ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಹೈದರ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಹಿಳೆಯ ಸೋದರ ಮಾವ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಮಗ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಗಳು 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವರು ಹಲವಾರು ದಿನಗಳಿಂದ ಜಗಳವಾಡುತ್ತಿದ್ದರು. ಆದರೆ ಅವನು ಕೊಲೆ ಮಾಡುವ ನಿರ್ಧಾರ ಮಾಡುತ್ತಾನೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ