ಸುರತ್ಕಲ್: ಪರಂಬೋಕು ಜಮೀನನ್ನು ಅತಿಕ್ರಮಿಸಿಕೊಂಡು ಕಾಲೇಜು ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತು ಮುಕ್ಕ ಶ್ರೀನಿವಾಸ್ ಕಾಲೇಜಿನ ಮುಖ್ಯಸ್ಥ ಶ್ರೀನಿವಾಸ್ ರಾವ್ ಮತ್ತು ಅದರ ಇತರ ಪಾಲುದಾರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ಕ ಬಳಿಯ ಸರ್ವೆ ನಂಬ್ರ ೪೭-೧-ಎ೧ರಲ್ಲಿರುವ ೪.೧೧ಎಕರೆ ಪರಂಬೋಕು ಸ್ಥಳದ ಬದಿಯಲ್ಲಿ ಶ್ರೀನಿವಾಸ್ ಕಾಲೇಜು ೦.೨೩ ಎಕರೆ ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಂಡು ತನ್ನ ಕಾಲೇಜು ಕಟ್ಟಡವನ್ನು ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಸುರತ್ಕಲ್ ಹೋಬಳಿ ಕಂದಾಯ ನಿರೀಕ್ಷಕ ಎನ್.ಜಿ. ಪ್ರಸಾದ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರಂಬೋಕು ಜಮೀನನನ್ನು ಅಕ್ರಮವಾಗಿ ಕಬಳಿಸಿಕೊಂಡು ಶ್ರೀನಿವಾಸ ಕಾಲೇಜು ನೂತನ ಕಟ್ಟಡ ಕಟ್ಟುತ್ತಿರುವ ಕುರಿತು ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಾ.೬ರಂದು ಸ್ಥಳಕ್ಕೆ ಭೇಟಿ ನೀಡಿ ಸರಕಾರಿ ನಿಶಾಂತ್ ತಂತ್ರಾಂಶದ ಮೂಲಕ ಪರಿಶಿಲನೆ ನಡೆಸಲಾಗಿತ್ತು. ಈ ವೇಳೆ ೦.೨೩ ಎಕರೆ ಸ್ಥಳವನ್ನು ಅಕ್ರಮವಾಗಿ ಕಬಳಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾ. ೧೦ರಂದು ಮುಂದಿನ ಮಹಜರು ಕಾರ್ಯ ನಡೆಸಲಾಗಿದೆ ಎಂದು ಕಂದಾಯ ನಿರೀಕ್ಷಕ ಎನ್.ಜಿ. ಪ್ರಸಾದ್ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀನಿವಾಸ ಕಾಲೇಜಿನ ವಿಷಪೂರಿತ ತ್ಯಾಜ್ಯ ನೀರನ್ನು ನಂದಿನಿ ನದಿಗೆ ಬಿಡುತ್ತಿದ್ದು, ಇದರಿಂದಾಗಿ ನಂದಿನಿ ನದಿ ಸಂಪೂರ್ಣ ಕಲುಷಿತ ಗೊಂಡಿದೆ ಎಂದು ಆರೋಪಿಸಿ ಚೇಳಾಯರು ಗ್ರಾಮಸ್ಥರು ನಂದಿನಿ ನದಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪೆರತಿಭಟನೆ ನಡೆಸಿದ್ದರು.