ಮಂಗಳೂರು: ಗುರುವಾರ ಸಂಜೆ ಬಿಜೈ ಕಾಪಿಕಾಡಿನಲ್ಲಿ ನಿವೃತ್ತ
ಬಿಎಸ್ಸೆನ್ನೆಲ್ ನೌಕರನೊಬ್ ಹಳೆ ದ್ವೇಷದಲ್ಲಿ ನೆರೆಮನೆಯವನನ್ನೇ ಕಾರ್ ನಿಂದ ಡಿಕ್ಕಿ ಹೊಡೆದು ಕೊಲ್ಲುವ ಉದ್ದೇಶದಿಂದ ಕಾರನ್ನು ವೇಗವಾಗಿ ಚಲಾಯಿಸಿದ ವೇಳೆ ನೆರೆಮನೆಯ ವ್ಯಕ್ತಿ ಸಮೇತ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಗುದ್ದಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿ ಕಾರ್ ವಶಕ್ಕೆ ಪಡೆದಿದ್ದಾರೆ.
ಸತೀಶ್ ಮತ್ತು ಮುರಳಿ ಪ್ರಸಾದ್ ಎಂಬವರು ಅಕ್ಕಪಕ್ಕದ ನಿವಾಸಿಗಳಾಗಿದ್ದು ಯಾವುದೋ ವಿಚಾರಕ್ಕೆ ಜಗಳ ಉಂಟಾಗಿತ್ತು. ನಿನ್ನೆ ಸಂಜೆ ಮುರಳಿ ಬೈಕಿನಲ್ಲಿ ಮನೆಯತ್ತ ಬರುತ್ತಿದ್ದ ವೇಳೆ ಕೊಲ್ಲುವ ಉದ್ದೇಶದಿಂದ ಸತೀಶ್ ಕುಮಾರ್ ತನ್ನ 800 ಕಾರಿನಲ್ಲಿ ಹಿಂಬದಿಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ಗುದ್ದಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುರುಳಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರೆ, ಮಹಿಳೆ ಕಾಂಪೌಂಡ್ ಗೋಡೆಯ ಮೇಲಕ್ಕೆ ಎಸೆಯಲ್ಪಟ್ಟು ತಲೆ ಕೆಳಗಾಗಿ ಸಿಕ್ಕಿಕೊಂಡಿದ್ದಾರೆ. ಆನಂತರ ಸ್ಥಳೀಯ ನಿವಾಸಿಗಳು ಓಡಿ ಬಂದು ಗೋಡೆಯಲ್ಲಿ ಸಿಕ್ಕಿಕೊಂಡಿದ್ದ ಮಹಿಳೆಯನ್ನು ಕೆಳಕ್ಕಿಳಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 2023ರಲ್ಲಿ ಮುರುಳಿ ಪ್ರಸಾದ್ ಅವರ ತಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸತೀಶ್ ಕಾರ್ ತಾಗಿಸಿಕೊಂಡು ಸಾಗಿದ್ದು ಉರ್ವಾದಲ್ಲಿ ಕೇಸು ದಾಖಲಾಗಿತ್ತು. ಇದೀಗ ಮಗನ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾನೆ.