
ಕಾಸರಗೋಡು: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನ ನಗ್ನ ವಿಡಿಯೋಗಳನ್ನು ಇಟ್ಟು ವೈರಲ್ ಮಾಡುವುದಾಗಿ ಬೆದರಿಸಿ ರೂ. 10.5 ಲಕ್ಷ ಹಣ ಪೀಕಿಸಿದ ಬ್ಲ್ಯಾಕ್ ಮೇಲ್ ಆರೋಪಿಯನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಮಂಗಳೂರಿನ ಗುರುಪುರದಲ್ಲಿ ಬಂಧಿಸಿದ್ದಾರೆ.
ಮಂಗಳೂರಿನ ಗುರುಪುರದ ಕೊಳಂಬೆಯ ನಿವಾಸಿ ಅಶ್ವಥ್ ಆಚಾರ್ಯ (33) ಬಂಧಿತ ಆರೋಪಿ.
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಧಾರಿಯಾಗಿದ್ದ ಅಶ್ವಥ್ ಫೇಸ್‌ಬುಕ್ ಮುಖಾಂತರ ಬದಿಯಡ್ಕದ ಮೂವತ್ತು ವರ್ಷ ಪ್ರಾಯದ ಅರ್ಚಕ ಯುವಕನ ಸಂಪರ್ಕ ಸಾಧಿಸಿ ಆತ್ಮೀಯತೆ ಬೆಳೆಸಿಕೊಂಡಿದ್ದ.
ಅಶ್ವಥ್ ಅರ್ಚಕನ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದು, ಬಳಿಕ ಆತನ ನಗ್ನ ಚಿತ್ರವನ್ನು ಇಟ್ಟುಕೊಂಡು ಬ್ಲ್ಯಾಕ್ ಮೆಲ್ ಮಾಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಶ್ವತ್ ಆಚಾರ್ಯ ತನ್ನ ಲಿಂಗ ಬದಲಾವಣೆಗೆಗಾಗಿ ಹಣ ಸಂಗ್ರಹಿಸಲೆಂದು ಅರ್ಚಕನನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಸಂಗ್ರಹಿಸಿರುವುದನ್ನು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಅರ್ಚಕನಿಗೆ ವಿಡಿಯೋ ಕಾಲ್ ವೇಳೆ ಸಂಗ್ರಹಿಸಿದ್ದ ನಗ್ನ ಫೋಟೋಗಳನ್ನು ಕಳುಹಿಸಿ ಹಣ ಪೀಕಿಸಿದ್ದಾನೆ.
ಹಂತ ಹಂತವಾಗಿ ಜೀ ಪೇ ಹಾಗೂ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ಸುಮಾರು 10.5 ಲಕ್ಷ ರೂಪಾಯಿಗಳನ್ನು ಪೀಕಿಸಿದ್ದಾನೆ.
2024 ರ ನವೆಂಬರ್ ತಿಂಗಳಿನಿಂದ ಈ ರೀತಿಯಾಗಿ ಅಶ್ವಥ್ ಆಚಾರ್ಯ ಹಣ ಪೀಕಿಸಿದ್ದು, ಇದೀಗ ಅರ್ಚಕರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಬದಿಯಡ್ಕ ಪೊಲೀಸರು ರಾತೋರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿ ಆಶ್ವಥ್‌ನನ್ನು ಅವನ ಮನೆಯಿಂದಲೇ ಬಂಧಿಸಿದ್ದಾರೆ.