ಎಲ್ಲ ಠಾಣೆಗಳಿಗೆ “ಬೇಕಾಗಿದ್ದ” ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಆಂಡ್ ಟೀಮ್!

ಮಂಗಳೂರು: ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸಿ 42 ಪ್ರಕರಣಗಳಲ್ಲಿ ಬಹುತೇಕ ಎಲ್ಲ ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟುವಲ್ಲಿ ಮೂಡಬಿದ್ರೆ ಠಾಣಾ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದ್ದು ನಾಗರಿಕರ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಆಗಸ್ಟ್ 15ರಂದು ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ 70 ವರ್ಷ ಪ್ರಾಯದ ನಿರ್ಮಲ ಪಂಡಿತ್ ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ
ಮೌಲ್ಯದ ಚಿನ್ನದ ಸರವನ್ನು ಕಸಿದು ಕಳ್ಳರು ಪರಾರಿಯಾಗಿದ್ದರು. ಸೆ.2ರಂದು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿ82 ವರ್ಷ ಪ್ರಾಯದ ಪ್ರೇಮಾ ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವ ಪೊಲೀಸ್ ತಂಡ ಕುಖ್ಯಾತ ಕಳ್ಳ ಹತ್ತಾರು ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಳ್ಳಾಲ ಚೊಂಬುಗುಡ್ಡೆ ನಿವಾಸಿ ಹಬೀಬ್ ಹಸನ್ ಯಾನೆ ಹಬ್ಬಿ ಎಂಬಾತನನ್ನು ಬಂಧಿಸಿ ಕಳ್ಳತನ ಮಾಡಿದ್ದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಈತನ ಜೊತೆ ಬಂಟ್ವಾಳ ಪರ್ಲಿಯಾ ನಿವಾಸಿ ಉಮ್ಮರ ಸಿಯಾಫ್ ಯಾನೆ ಚಿಯಾ ಎಂಬತನನ್ನು ವಶಕ್ಕೆ ಪಡೆಯಲಾಗಿದೆ.
ಹಬ್ಬಿ ವಿರುದ್ಧ ವಿವಿಧ ಠಾಣೆಗಳಲ್ಲಿ 42 ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಜ್ಜೆ ಪೊಲೀಸ್ ಠಾಣೆಯಲ್ಲಿ 3, ಮಂಗಳೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ 9, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 3, ಬರ್ಕೆ ಪೊಲೀಸ್ ಠಾಣೆಯಲ್ಲಿ 1, ಮೂಲ್ಕಿ ಪೊಲೀಸ್ ಠಾಣೆಯಲ್ಲಿ 1, ಕೊಣಾಜೆ ಪೊಲೀಸ್ ಠಾಣೆಯಲ್ಲಿ 3, ಮಣಿಪಾಲ ಪೊಲೀಸ್ ಠಾಣೆಯಲ್ಲಿ 4, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 3, ಮಲ್ಪೆ ಪೊಲೀಸ್ ಠಾಣೆಯಲ್ಲಿ 2, ಶಿರ್ವಾ
ಪೊಲೀಸ್ ಠಾಣೆಯಲ್ಲಿ 1, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 5, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ 1, ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

error: Content is protected !!