ಮಂಗಳೂರು: “ನಾವು ಪಕ್ಷ ಸಂಘಟನೆಯ ದೃಷ್ಟಿಯಿಂದ ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರ ಮೂಲಕ ಜವಾಬ್ದಾರಿಯನ್ನು ಹಂಚಿದ್ದೇವೆ. ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ತರಲು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ“ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತಾಡಿದ ಅವರು ”ಮಂಗಳೂರಿನಲ್ಲಿ ಬೃಹತ್ ಕೈಗಾರಿಕೆಗಳು ಇದ್ದರೂ ಇಲ್ಲಿನವರಿಗೆ ಉದ್ಯೋಗ ಸಿಗುತ್ತಿಲ್ಲ. ಯಾಕೆಂದರೆ ಇಲ್ಲಿ ಜನರ ಹಿತದೃಷ್ಟಿಗಿಂತ ರಾಜಕೀಯವೇ ಜಾಸ್ತಿ ಆಗಿದೆ. ಆದ್ದರಿಂದ ಜಿಲ್ಲೆಗೆ ಏನು ಬೇಕೋ ಆ ಕೆಲಸ ಮಾಡುವಲ್ಲಿ ರಾಜಕೀಯ ಬದಿಗಿಟ್ಟು ಕೆಲಸ ಮಾಡಬೇಕು. ರಾಜಕೀಯ ಚುನಾವಣೆ ಬಂದಾಗ ಮಾಡೋಣ ಅದನ್ನು ಬಿಟ್ಟು ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿದಲ್ಲಿ ಮಂಗಳೂರು ಮುಂದೆಯೂ ಹೀಗೆಯೇ ಇರುತ್ತದೆ. ರಾಜಕೀಯ ಬದಿಗಿರಿಸಿ ಕೆಲಸ ಮಾಡಬೇಕು. ಕೋಮುಭಾವನೆ ಕೆರಳಿಸೋದು ದೊಡ್ಡ ಸಾಧನೆಯಲ್ಲ. ಸಮಸ್ಯೆ ಬಗೆಹರಿಸಲು ಎಲ್ಲ ಶಾಸಕರು ಒಗ್ಗಟ್ಟಾಗಿ ಹೋಗೋಣ“ ಎಂದರು.
”224 ಕ್ಷೇತ್ರಗಳಲ್ಲೂ ಒಬ್ಬ ಮಹಿಳೆಗೆ ಅವಕಾಶ ನೀಡಬೇಕು. ಪ್ರಾತಿನಿಧ್ಯ ಸಿಗದ ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಗೋವಾ ಮತ್ತು ಮಂಗಳೂರು ಎರಡೂ ಒಂದೇ ರೀತಿ ಇದೆ. ಆಚಾರ ವಿಚಾರ, ಆಹಾರಶೈಲಿ, ಹವಾಗುಣ ಎಲ್ಲವೂ ಒಂದೇ ಆಗಿದೆ. ಹಾಗಿದ್ದರೂ ಪ್ರವಾಸಿಗರು ಬರುತ್ತಿಲ್ಲ.
ಮಂಗಳೂರಿನ ಪರಂಪರೆ ಸರ್ವನಾಶ ಮಾಡಿದ್ದು ಬಿಜೆಪಿಯವರು“ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್ ಮಾತಾಡುತ್ತ, “ಬಿಜೆಪಿ ಮಂಗಳೂರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಸೋಲು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಗೆಲುವಿನತ್ತ ಕೊಂಡೊಯ್ಯಲು ಕಾರ್ಯಕ್ರಮ ರೂಪಿಸಲಾಗಿದೆ“ ಎಂದರು.
ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ, ”ನಾವು 5 ಜನ ಕಾರ್ಯಾಧ್ಯಕ್ಷರು ವಿದ್ಯಾರ್ಥಿ ಸಂಘಟನೆಯಿಂದ ಬಂದವರು. ನಮ್ಮ ಮುಖ್ಯ ಉದ್ದೇಶವೇ ಪಕ್ಷದ ಸಂಘಟನೆಯಾಗಿದೆ. ಪ್ರತೀ ಜಿಲ್ಲೆಗೂ ಐವರು ಜೊತೆಯಾಗಿ ಭೇಟಿಕೊಟ್ಟು ಸಂಘಟನೆ ಬಲವರ್ಧನೆಗೆ ಶ್ರಮಿಸಲಿದ್ದೇವೆ. ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ವೋಟ್ ಬಿದ್ದಿದೆ ನಾವು ನಂಬರ್ ಗೇಮ್ ನಲ್ಲಿ ಸೋತಿದ್ದೇವೆ. ಹೀಗಾಗಿ ಸೋಲಿನ ಪರಾಮರ್ಶೆ ನಡೆಸಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯಲು ನಿರ್ಧಾರ ಮಾಡಿದ್ದೇವೆ. ಅಭಿವೃದ್ಧಿಯಲ್ಲಿ ನಾವು ರಾಜಕೀಯ ಮಾಡಬಾರದು. ಪಿಲಿಕುಳದಲ್ಲಿ ತುಳುನಾಡ ಉತ್ಸವ ಮಾಡಲು ಇತ್ತೀಚಿಗೆ ಬೆಂಗಳೂರಿನಲ್ಲಿ ಮೀಟಿಂಗ್ ಕರೆಯಲಾಗಿತ್ತು. ಅದರಲ್ಲಿ ಎಲ್ಲರೂ ಭಾಗಿಯಾಗಿ ಸಮ್ಮತಿ ಸೂಚಿಸಿದ್ದಾರೆ. ಇದು ಖುಷಿಯ ವಿಚಾರ. ಹಿಂದೆ ಮಂಗಳೂರು ಎಜುಕೇಷನ್ ಹಬ್ ಆಗಿತ್ತು. ಹಿಂದೆ ಯುಪಿ, ಬಿಹಾರ, ಜಾರ್ಖಂಡ್ ಕಡೆಯಿಂದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಕಲಿಯಲು ಬರುತ್ತಿದ್ದರು. ಆದರೆ ಇಂದು ಮಕ್ಕಳು ನಮ್ಮಲ್ಲಿಗೆ ಬರುತ್ತಿಲ್ಲ.
ಏರ್ ಪೋರ್ಟ್, ಪೋರ್ಟ್, ರೈಲ್ವೇಸ್ ಸಂಪರ್ಕ ಇದ್ದರೂ ಇಲ್ಲಿಗೆ ಹೊರಗಿನಿಂದ ಜನರು ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ“ ಎಂದರು.
ವೇದಿಕೆಯಲ್ಲಿ ವಿಜಯ ಮುಳಗುಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಬಾಲರಾಜ್, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.