ಮೂಲ್ಕಿ ಅರಮನೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಪಡುಪಣಂಬೂರು: ಮೂಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ಸೆಸ್ಸೆಲ್ಸಿ ಪಿಯುನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಗುರುವಾರ ಬೆಳಗ್ಗೆ ಮೂಲ್ಕಿ ಅರಮನೆಯಲ್ಲಿ ಜರುಗಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ನಿವೃತ್ತ ಪ್ರಾಂಶುಪಾಲ ವಾಸುದೇವ ಬೆಳ್ಳೆ ಅವರು, “ವಿದ್ಯಾರ್ಥಿಗಳ ಬದುಕಿನ ಐತಿಹಾಸಿಕ ಘಟನೆ ಐತಿಹಾಸಿಕ ಕ್ಷೇತ್ರದಲ್ಲಿ ನಡೆಯುತ್ತಿದೆ. ಯಾಕೆಂದರೆ ಮೂಲ್ಕಿ ಪರಿಸರದಲ್ಲಿ 90% ಕ್ಕಿಂತ ಹೆಚ್ಚು ಶೈಕ್ಷಣಿಕ ಸಾಧನೆ ಮಾಡಿರುವ ಮಕ್ಕಳಿಗೆ ಇಲ್ಲಿ ಗೌರವ ಅರ್ಪಿಸಲಾಗುತ್ತಿದೆ. ಇದು ಮಕ್ಕಳಿಗೆ ನಿಜಕ್ಕೂ ತಮ್ಮ ಜೀವನದಲ್ಲಿ ಸ್ಮರಿಸುವ ವಿಷಯವಾಗಿದೆ. ಇದು ಮಕ್ಕಳ ಮುಂದಿನ ಜೀವನಕ್ಕೆ ಸ್ಫೂರ್ತಿಯಾಗಲಿದೆ. ಸರಕಾರಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಂತಹ ಸವಲತ್ತು, ಬೆಂಬಲ ಸಿಕ್ಕಿದಲ್ಲಿ ಅವರು ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮಕ್ಕಳು ಇದನ್ನು ಆಶೀರ್ವಾದ ಎಂದುಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಕಷ್ಟದಲ್ಲಿರುವವರಿಗೆ ನೆರವಾಗುವ ಶ್ರೀಮಂತ ಮನಸ್ಸು ನಮ್ಮಲ್ಲಿದೆ ಅನ್ನೋದಕ್ಕೆ ಇಂಥ ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿ. ವಿದ್ಯಾರ್ಥಿಗಳು ಎಂತಹ ಕಷ್ಟದ ಸಂದರ್ಭದಲ್ಲಿಯೂ ಧೃತಿಗೆಡದೆ ಮುನ್ನುಗ್ಗಿ” ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, “ಅರಸು ಮನೆತನದವರು ಕೆಲಸದ ಒತ್ತಡದ ಮಧ್ಯೆಯೂ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಮತ್ತು ಪುಸ್ತಕ ವಿತರಣೆ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ಕಾರ್ಯವಾಗಿದೆ. ಮುಂದೆಯೂ ಮೂಲ್ಕಿ ಅರಮನೆಯ ಸಾಮಾಜಿಕ ಕಳಕಳಿ ಇದೇ ರೀತಿ ಮುಂದುವರಿಯಲಿ” ಎಂದು ಶುಭ ಹಾರೈಸಿದರು.
ಜಾನಪದ ವಿಧ್ವಾಂಸ ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, “ಪ್ರತಿಭೆ ಹುಟ್ಟುವುದು ಗುಡಿಸಲಿನಲ್ಲಿ ಬೆಳೆಯುವುದು ಅರಮನೆಯಲ್ಲಿ ಅನ್ನೋದು ನಾಣ್ಣುಡಿ. ಇಲ್ಲಿನ ಅರಮನೆಯ ಅರಸರು ತಾವೇ ಮುಂದೆ ಬಂದು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರೆ. ಇದು ಶ್ಲಾಘನೀಯ ವಿಚಾರ. ಇಂದಿನ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗದೆ ತಮ್ಮತನವನ್ನು ಉಳಿಸಿಕೊಳ್ಳಬೇಕು. ಮೊಬೈಲ್ ಬಳಕೆ ಮಾಡದೇ ಬರೆಯುವುದು ಮತ್ತು ಓದುವುದರಲ್ಲಿ ತೊಡಗಿಕೊಳ್ಳಿ” ಎಂದು ಕರೆ ನೀಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇದರ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, “ಆಧುನಿಕ ಕಾಲಘಟ್ಟದಲ್ಲೂ ತಮ್ಮ ಸುತ್ತಮುತ್ತಲಿನ ಮಕ್ಕಳ ಅಭಿವೃದ್ಧಿಗಾಗಿ ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಮೂಲ್ಕಿ ಸೀಮೆ ಅರಸರ ಕಾರ್ಯಕ್ರಮ ಮೆಚ್ಚುವಂತದ್ದು. ಮಕ್ಕಳು ಇಂಥ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ” ಎಂದರು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಜೂನಿಯರ್ ಕಾಲೇಜ್ ಪ್ರಾಂಶುಪಾಲ ವಾಸುದೇವ ಬೆಳ್ಳೆ, ಜಾನಪದ ವಿಧ್ವಾಂಸ ಪ್ರೊ. ಗಣೇಶ್ ಅಮೀನ್ ಸಂಕಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿವೇಕ್ ಆಳ್ವ, ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಗೌತಮ್ ಜೈನ್, ರಶ್ಮಿತಾ ಜೈನ್, ವಂದನಾ ರೈ ಕಾರ್ಕಳ, ಎಸ್ ಡಿ ಎಂ ಸ್ಕೂಲ್ ನ ಮಿಸ್ ಜಾಯ್ ಜೀವನ್ ರೈ, ಕಸ್ತೂರಿ ಪಂಜ, ವಸಂತ ಬೆರ್ನಾರ್ಡ್, ಕಾಂತಣ್ಣ ಗುರಿಕಾರ ಕಲ್ಲಾಪು, ಶ್ಯಾಮ್ ಆಸ್ಟಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ವಿನೋದ್ ಸಾಲಿಯಾನ್ ಬೆಳ್ಳಾಯರು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.