ನಾಯಕರ ಹಿಂದೆ ಸುತ್ತದೆ ಬೂತ್ ಬಲಗೊಳಿಸಲು ಕಾರ್ಯಕರ್ತರಿಗೆ ಇನಾಯತ್ ಅಲಿ ಕರೆ!

ಸುರತ್ಕಲ್: ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಮಾವೇಶ ಇಲ್ಲಿನ ಕಾವೂರು ಸೊಸೈಟಿ ಹಾಲ್ ನಲ್ಲಿ ಜರುಗಿತು.


ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು, “ವಲ್ಲಭ ಭಾಯ್ ಪಟೇಲ್ ಅವರು ಸಂಘ ಪರಿವಾರದ ಧೋರಣೆಯನ್ನು ಸಂಪೂರ್ಣವಾಗಿ ವಿರೋಧಿಸಿದವರು. ಕಾಂಗ್ರೆಸ್ ಪಕ್ಷ ದೇಶದಲ್ಲಿ ಆಳ್ವಿಕೆಯಲ್ಲಿದ್ದ ಕಾಲದಲ್ಲಿ ದೇಶದಲ್ಲಿ ಗಮನಾರ್ಹ ಬದಲಾವಣೆಯಾಯಿತು. ಉಳುವವನೇ ಹೊಲದೊಡೆಯ ಭೂ ಮಸೂದೆ ಕಾನೂನಿನಿಂದ ದೇಶದಲ್ಲಿ ಬಡವರಿಗೆ ತುಂಡು ಭೂಮಿ ಸಿಕ್ಕಿತು. ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ ಅದಕ್ಕೆ ಭೂ ಮಸೂದೆ ಕಾನೂನು ಮತ್ತು ಕಾಂಗ್ರೆಸ್ ಸರಕಾರ ಕಾರಣ. ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಳಿಕವಷ್ಟೇ ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದರು. ಅವರ ಕಗ್ಗೊಲೆ ನಡೆದ ಬಳಿಕವಷ್ಟೇ ರಾಹುಲ್ ಗಾಂಧಿ ಎದುರು ಬಂದರು. ಕಾಂಗ್ರೆಸ್ ಪಕ್ಷದ್ದು ವಂಶ ಪಾರಂಪರ್ಯ ಆಡಳಿತ ಎನ್ನುವ ಬಿಜೆಪಿಗರು ಇದನ್ನು ತಿಳಿದುಕೊಳ್ಳಬೇಕು. ಸೋನಿಯಾ ಗಾಂಧಿ ಅವರಿಗೆ ಈ ದೇಶದ ಪ್ರಧಾನಿ ಆಗುವ ಯೋಗ್ಯತೆ ಮತ್ತು ಅರ್ಹತೆ ಎರಡೂ ಇತ್ತು. ಮಿತ್ರ ಪಕ್ಷಗಳ ತೀವ್ರ ಒತ್ತಾಯ ಇದ್ದರೂ ಅವರು ಆಗಲಿಲ್ಲ ಇದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ” ಎಂದರು.


ಬಳಿಕ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ಜಿಲ್ಲೆಯಲ್ಲಿ ಬೃಹತ್ ಕಾರ್ಖಾನೆಗಳು, ವಿಮಾನ ನಿಲ್ದಾಣ, ಬಂದರ್ ನಿರ್ಮಾಣವಾಗಿದ್ದು ಕಾಂಗ್ರೆಸ್ ನ ಶ್ರೀನಿವಾಸ್ ಮಲ್ಯ ಸಂಸದರಾಗಿದ್ದಾಗ. ಜಿಲ್ಲೆಯ ಜನರಿಗೆ ಸ್ವಾಭಿಮಾನದ ಬದುಕು ನೀಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಈ ಬಾರಿ ಮಾಡು ಇಲ್ಲವೇ ಮಡಿ ಎನ್ನುವಂತಹ ಚುನಾವಣೆಯಾಗಿದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದೆ ಅವರು ಚುನಾವಣೆ ಮಾಡುವುದಿಲ್ಲ, ಬದಲಿಗೆ ಸರ್ವಾಧಿಕಾರ ಮಾಡುತ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನೇತೃತ್ವದ ಪಕ್ಷ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಹೇಳಿದಂತೆ ನಡೆದಿದ್ದು ಮುಂಬರುವ ಚುನಾವಣೆಯಲ್ಲಿ ಗೆದ್ದರೆ 10 ಗ್ಯಾರಂಟಿಗಳನ್ನು ಈಗಾಗಲೇ ರಾಹುಲ್ ಗಾಂಧಿ ಅವರು ಪ್ರಕಟಿಸಿದ್ದಾರೆ. ಇಲ್ಲಿ ಕೆಲಸ ಮಾಡದ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ಪಕ್ಷ ಬದಲಿಸಿದೆ. ಇದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ನಾಯಕರ ಹಿಂದೆ ಸುತ್ತದೆ ಬೂತ್ ಬಲಗೊಳಿಸಲು ಕಾರ್ಯಕರ್ತರು ದುಡಿಯಬೇಕು” ಎಂದರು.


ಬಳಿಕ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು, “ನನ್ನನ್ನು ಎಲ್ಲಾ ನಾಯಕರು ಸೇರಿ ಸರ್ವ ಸಮ್ಮತಿಯಿಂದ ಇಂದು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಅದಕ್ಕಾಗಿ ಧನ್ಯವಾದಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೇ ಅಭಿವೃದ್ಧಿಯಾಗಿದ್ದರೂ ಅದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ. ನಮ್ಮ ಸಂಸದರು ಇಲ್ಲಿ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಹೊಸದಾಗಿ ಏನನ್ನೂ ಕಳೆದ 33 ವರ್ಷಗಳಲ್ಲಿದ್ದ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಪ್ರತೀ ತಿಂಗಳು 5ರಿಂದ 7 ಸಾವಿರ ರೂ. ಸಿಗುತ್ತಿದೆ. ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಮನೆಮನೆಗೆ ತಲುಪಿಸಿದರೆ ಗೆಲುವು ದಾಖಲಿಸುವುದು ಕಷ್ಟವಲ್ಲ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆಯಲ್ಲ. ಜಿಲ್ಲೆಯಲ್ಲಿ ಸಾಮರಸ್ಯದ ಗತ ವೈಭವವನ್ನು ಮರಳಿ ತರಬೇಕು. ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿರುವ ಜಿಲ್ಲೆಯಲ್ಲಿ ದೊಡ್ಡ ಕಂಪೆನಿಗಳು ಬರುವುದಿಲ್ಲ, ಶಿಕ್ಷಣ ಸಂಸ್ಥೆಗಳು, ಐಟಿ ಸಂಸ್ಥೆಗಳು ಬರುವುದಿಲ್ಲ. ಇದರಿಂದ ಇಲ್ಲಿನ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಸಿಗುವುದಿಲ್ಲ. ಆದ್ದರಿಂದ ಕೋಮು ಸಾಮರಸ್ಯಕ್ಕೆ ನಾಂದಿ ಹಾಡುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಅಭಿವೃದ್ಧಿಗೆ ನಾಂದಿ ಹಾಡೋಣ. ನಾನು ಇಂದಿಗೂ ನಿಮ್ಮವನೇ, ನೀವು ತಲೆಯನ್ನು ಯಾವತ್ತೂ ತಗ್ಗಿಸುವ ರೀತಿ ಕೆಲಸ ಮಾಡುವುದಿಲ್ಲ” ಎಂದರು.


ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಮಾಜಿ ಸಚಿವ ಬಿ. ರಮಾನಾಥ್ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ಗುಲ್ಜಾರ್ ಬಾನು, ಕವಿತಾ ಸನಿಲ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವರಿಸ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಸುರೇಂದ್ರ ಕಂಬಳಿ, ಐವನ್ ಡಿಸೋಜ, ಪ್ರತಿಭಾ ಕುಳಾಯಿ, ರಾಕೇಶ್ ಮಲ್ಲಿ, ಸದಾಶಿವ ಶೆಟ್ಟಿ, ಎಂಜಿ ಹೆಗಡೆ, ಗಿರೀಶ್ ಆಳ್ವ, ಹರಿನಾಥ್, ಅಶ್ರಫ್, ನವೀನ್ ಡಿಸೋಜ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

error: Content is protected !!